ಕೆಟ್ಟ ಕೆಲಸ ಮಾಡಿದವರನ್ನು ಬಿಡುವುದಿಲ್ಲ: ಬಿಜೆಪಿ ಶಾಸಕ ಯತ್ನಾಳ್ ಆಕ್ರೋಶ

Update: 2021-01-14 13:39 GMT

ಬಾಗಲಕೋಟೆ, ಜ. 14: ‘ನಾನು ಹಿಂದುತ್ವದ ಮೇಲೆ ಬಂದವ, ಜಾತಿಯಲ್ಲಿ ಮುಂಚೂಣಿಯಲ್ಲಿ ಇರಬೇಕೆಂದುಕೊಂಡವನಲ್ಲ. ಸಮುದಾಯ ಬಳಸಿಕೊಂಡು ಮುಖ್ಯಮಂತ್ರಿ ಆಗುವಂತಹ ಕೆಲಸ ಮಾಡಲು ನಾನು ಹೋಗುವುದಿಲ್ಲ. ಕೆಟ್ಟ ಕೆಲಸ ಮಾಡಿದವರನ್ನು ಬಿಡುವವನು ನಾನು ಅಲ್ಲ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಯಡಿಯೂರಪ್ಪ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ.

ಗುರುವಾರ ಜಿಲ್ಲೆಯ ಕೂಡಲಸಂಗಮದಲ್ಲಿ ಆಯೋಜಿಸಿದ್ದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2‘ಎ' ಮೀಸಲಾತಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಪಾದಯಾತ್ರೆ ಚಾಲನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಮಠಗಳಿಗೆ ಹಣ ನೀಡಿ ಸ್ವಾಮೀಜಿ ಬುಕ್ ಮಾಡುತ್ತೀರಿ' ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನನಗೆ ಕೆಲವರು ಬಾಯಿ ಕಡಿಮೆ ಮಾಡಿದರೆ ಮುಖ್ಯಮಂತ್ರಿ ಆಗುತ್ತಿದ್ದೀರಿ ಎಂದು ಹೇಳಿದರು. ಆದರೆ, ಸಿಎಂ ಆಗಿ ಕಿಸಿಯೋದೇನಿದೆ. 20 ಕೋಟಿ ರೂ.ನೀಡಿ ಮಠ ಖರೀದಿ ಮಾಡಲು ಸಾಧ್ಯವಿಲ್ಲ. ನಾನು ಹಿಂದೆ ಕಾರ್ಯಕ್ರಮದಲ್ಲಿ ಜಮಖಾನೆ ಹಾಸಿದವ. ಈಗ ಈ ಸ್ಥಾನಕ್ಕೆ ಬಂದಿದ್ದೇನೆ. ಪುಣ್ಯಾತ್ಮ ಅಟಲ್‍ಜೀ ಚಿಕ್ಕ ವಯಸ್ಸಿನಲ್ಲೇ ನನ್ನನ್ನು ಗುರುತಿಸಿ ಸಚಿವ ಸ್ಥಾನ ನೀಡಿದ್ದರು' ಎಂದು ಸ್ಮರಿಸಿದರು.

ಮೀಸಲಾತಿಗೆ ಆಗ್ರಹಿಸಿ ನಾನು ರಾಜೀನಾಮೆ ಕೊಡುವುದಿಲ್ಲ. ಬದಲಿಗೆ ಮೀಸಲಾತಿ ಹೇಗೆ ಮಾಡಿಸಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ ಎಂದ ಅವರು, ವೇದಿಕೆ ಮೇಲೆ ಎಲ್ಲರೂ ಮಾಜಿಗಳಿದ್ದಾರೆ, ನಾನೊಬ್ಬನೇ ಹಾಲಿ. ಹೀಗಾಗಿ ನಾನು ಮಾತನಾಡೋದೆ ಬೇರೆ. ಪಾದಯಾತ್ರೆ ಹೊಸಪೇಟೆ ಮುಟ್ಟುವವರೆಗೆ ಏನೇನು ಆಸೆ ಬರ್ತಾವೆ ನೋಡ್ತೀವಿ. ನಾವೇನು ಕತ್ತೆ ಕಾಯುತ್ತೇವೆಯೇ ಎಂದು ಆಕ್ರೋಶ ಹೊರಹಾಕಿದರು.

ಭಾಷಣದಿಂದ ಏನು ಆಗಲ್ಲ. ಸಿಎಂ ಅವರೇ ನಿಮ್ಮ ಮಾತು ಕೃತಿಯಲ್ಲಿ ಬರಲಿ. ಪಂಚಮಸಾಲಿ ಸಮುದಾಯದ ಋಣಭಾರ ಇದೆ ಎಂದು ಹೇಳುತ್ತೀರಿ, ಅದರಂತೆ ನಡೆದುಕೊಳ್ಳಿ. ಪಾದಯಾತ್ರೆ ಬೆಂಗಳೂರು ತಲುಪುವುದರೊಳಗೆ 10 ಲಕ್ಷ ಜನ ಸೇರುತ್ತಾರೆ. ಆಗ ಇಂದಿನ ಪ್ರಧಾನಿಗಳೇ ಮೀಸಲಾತಿ ಘೋಷಣೆ ಮಾಡುತ್ತಾರೆ. ಅಂತಹ ಒಳ್ಳೆಯ ಪ್ರಧಾನಿಗಳು ಮೋದಿ ಆಗಿದ್ದಾರೆ ಎಂದು ಯತ್ನಾಳ್ ಹೇಳಿದರು.

ಹೆದರುವ ಮಗ ನಾನಲ್ಲ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೇಳಿದಾಗ ನಾನು ಒಳ್ಳೆಯವನಾಗಿದ್ದೆ. ನಾನು ಅವರ ಪಾಲು ಕೇಳಿದ ಕೂಡಲೇ ಯತ್ನಾಳ್ ಒಳ್ಳೆಯವನಾಗಲಿಲ್ಲ. ಏನಾದರೂ ಮಾಡಿ ಮುಗಿಸಬೇಕು ಅಂತಾರೆ. ಆದರೆ, ನನ್ನೇನು ಮುಗಿಸ್ತೀರಿ ಎಂದು ಪ್ರಶ್ನಿಸಿದರು.

ನಾಳೆಯೇ ನನ್ನ ಸಿಎಂ ಮಾಡಿದರೂ ನಾನು ಹೋರಾಟ ಬಿಟ್ಟು ಹೋಗೋ ವ್ಯಕ್ತಿ ನಾನಲ್ಲ. ಹೋರಾಟ ವಿಫಲಗೊಳಿಸಲು ದೊಡ್ಡ ಷಡ್ಯಂತ್ರ ನಡಿಯುತ್ತಿದೆ. ಯಾರೂ ಬಗ್ಗಬೇಡಿ. ಸ್ವಾಮೀಜಿ ಬೆನ್ನತ್ತಿರಿ. ಸ್ವಾಮೀಜಿಗೆ ಆರ್ಥಿಕವಾಗಿಯೂ ಬೆನ್ನೆಲುಬಾಗಿ ನಿಲ್ಲುತ್ತೇವೆ. ಈ ಹೋರಾಟಕ್ಕೆ ನಾನು 5 ಲಕ್ಷ ರೂ. ನೀಡುತ್ತೇನೆ ಎಂದು ಯತ್ನಾಳ್ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News