83 ತೇಜಸ್ ಯುದ್ಧ ವಿಮಾನಗಳ ಖರೀದಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್

Update: 2021-01-14 16:07 GMT

ಬೆಂಗಳೂರು, ಜ.14: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‍ಎಎಲ್)ನಿಂದ 83 ತೇಜಸ್ ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರಕಾರವು ಆದೇಶ ನೀಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

ಗುರುವಾರ ನಗರದ ವಾಯುಪಡೆ ತರಬೇತಿ ಕಮಾಂಡ್ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಹಿರಿಯ ಸೇನಾಧಿಕಾರಿಗಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 83 ತೇಜಸ್ ವಿಮಾನಗಳ ಪೈಕಿ 73 ಯುದ್ಧ ವಿಮಾನಗಳಾಗಿರುತ್ತವೆ. ಇನ್ನುಳಿದ 10 ಯುದ್ಧ ವಿಮಾನಗಳನ್ನು ತರಬೇತಿಗಾಗಿ ಬಳಕೆ ಮಾಡಲಾಗುತ್ತದೆ ಎಂದರು.

ಈ ಎಲ್ಲ 83 ತೇಜಸ್ ಯುದ್ಧ ವಿಮಾನಗಳು ನಮ್ಮ ದೇಶದಲ್ಲೆ ತಯಾರಾಗಲಿವೆ. ಟಾಟಾ, ಎಲ್ ಅಂಡ್ ಟಿ ಸೇರಿದಂತೆ ದೊಡ್ಡ ಕಂಪೆನಿಗಳು ನಮ್ಮಲ್ಲಿವೆ. ಅವುಗಳನ್ನು ಹೊರತುಪಡಿಸಿ ಸುಮಾರು 500 ಕಂಪೆನಿಗಳು ಈ ಕೆಲಸದಲ್ಲಿ ತೊಡಗಿಕೊಳ್ಳಲಿದ್ದು, 50 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.

ಒಬ್ಬ ಒಮ್ಮೆ ಸೈನಿಕನಾದರೆ ಆತ ತನ್ನ ಜೀವಿತಾವಧಿಯವರೆಗೂ ಸೈನಿಕನಾಗಿಯೆ ಇರುತ್ತಾನೆ. ಜೀವನದ ಎಲ್ಲ ಸಂಘರ್ಷಗಳನ್ನು ಧೈರ್ಯದಿಂದ ಎದುರಿಸುವ ಮನಸ್ಥಿತಿ ಸೈನಿಕರಲ್ಲಿರುತ್ತದೆ. ನಮ್ಮ ಸಮಾಜವು ಸಶಸ್ತ್ರ ಪಡೆಗಳ ಅನುಭವಿಗಳಿಂದ ಸ್ಫೂರ್ತಿ ಪಡೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ರಾಜನಾಥ ಸಿಂಗ್, ವಾಯುನೆಲೆಯ ತರಬೇತಿ ಕೇಂದ್ರದಲ್ಲಿರುವ ಯುದ್ಧ ಸ್ಮಾರಕಕ್ಕೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಏರ್ ಆಫಿಸರ್ ಕಮಾಂಡಿಂಗ್ ಚೀಫ್ ಏರ್ ಮಾರ್ಷಲ್ ಆರ್.ಡಿ.ಮಾಥುರ್ ಕಾರ್ಯಕ್ರಮದಲ್ಲಿ ಗಣ್ಯರನ್ನು ಸ್ವಾಗತಿಸಿದರು. ಕರ್ನಾಟಕ ಬ್ರಾಂಚ್‍ನ ಏರ್‍ಫೋರ್ಸ್ ಅಸೋಸಿಯೇಷನ್ ಅಧ್ಯಕ್ಷ ಏರ್ ಮಾರ್ಷಲ್ ಎಚ್.ಬಿ.ರಾಜಾರಾಮ್(ನಿವೃತ್ತ) ವಂದನಾರ್ಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News