ನಾಳೆಯಿಂದ ಪದವಿ ತರಗತಿಗಳು ಪ್ರಾರಂಭ: ಆಫ್‍ಲೈನ್‍ಗೆ ಪೋಷಕರ ಅನುಮತಿ ಕಡ್ಡಾಯ

Update: 2021-01-14 16:37 GMT

ಬೆಂಗಳೂರು, ಜ.14: ಎಸೆಸೆಲ್ಸಿ, ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾದ ಬೆನ್ನಲ್ಲೇ ನಾಳೆಯಿಂದ(ಜ.15) ಎಲ್ಲ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಆಫ್‍ಲೈನ್ ತರಗತಿಗಳು ಆರಂಭವಾಗುತ್ತಿದೆ.

ರಾಜ್ಯ ಸರಕಾರ ಹಂತ ಹಂತವಾಗಿ ಶಾಲಾ ಕಾಲೇಜುಗಳನ್ನು ಆರಂಭಿಸುತ್ತಿದ್ದು, ಇದರ ನಡುವೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಕರು, ಪ್ರಾಧ್ಯಾಪಕರು, ಪ್ರಾಂಶುಪಾಲರಿಗೆ ಅಗತ್ಯ ಮುನ್ಸೂಚನೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ನೇರ ತರಗತಿಗಳಿಗೂ ಹಾಜರಾಗಬಹುದು, ಆನ್‍ಲೈನ್ ತರಗತಿಗೂ ಹಾಜರಾಗಬಹದು. ಆ ಆಯ್ಕೆ ವಿದ್ಯಾರ್ಥಿಗಳಿಗೇ ಇರುತ್ತದೆ. ಎರಡರಲ್ಲಿ ಒಂದಕ್ಕೆ ಹಾಜರಾತಿ ಕಡ್ಡಾಯವೆಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಆಫ್‍ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಒಪ್ಪಿಗೆ ಪತ್ರ ತರಬೇಕು. ಈ ಪತ್ರ ತರದಿದ್ದರೆ ನೇರ ತರಗತಿಗಳಿಗೆ ಪ್ರವೇಶ ಇರುವುದಿಲ್ಲ.

ಮಾರ್ಗಸೂಚಿಯಂತೆ ಆಫ್‍ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಕಾಲೇಜಿನ ಪ್ರಾಂಶುಪಾಲರ ನೇತೃತ್ವದಲ್ಲಿ ಮಾಡಬೇಕು. 

ತರಗತಿಗಳು ಆರೋಗ್ಯ ಇಲಾಖೆಯ ನಿಯಮಗಳನ್ನು ಮೀರುವಂತಿಲ್ಲ. ದೈಹಿಕ ಅಂತರ ಕಡ್ಡಾಯ. ತರಗತಿ ವೇಳಾಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ ಸಿದ್ಧ ಮಾಡಿಕೊಳ್ಳಬೇಕು. ಬೋಧನಾ, ಪ್ರಾಕ್ಟಿಕಲ್, ಪ್ರಾಜೆಕ್ಟ್ ತರಗತಿಗಳನ್ನು ಅಗತ್ಯಬಿದ್ದರೆ ಪಾಳಿ ಆಧಾರದಲ್ಲಿ ಮಾಡಬಹುದೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

-ನೇರ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಗೆ ಹಾಜರಾಗಬಹುದು. ಇಂಥ ವಿದ್ಯಾರ್ಥಿಗಳಿಗೆ ಪಠ್ಯದ ಬಗ್ಗೆ ಇರುವ ಅನುಮಾನ, ಗೊಂದಲಗಳನ್ನು ನಿವಾರಿಸಲು ಪ್ರತಿದಿನ ಭೌತಿಕ ಸಂಪರ್ಕ ತರಗತಿಗಳನ್ನು ನಡೆಸಬಹುದು. ಇಂಥ ಸಂಪರ್ಕ ತರಗತಿಗಳನ್ನು ನಡೆಸುವಾಗಲೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು. ಪ್ರತಿ ಹಂತದಲ್ಲೂ ದೈಹಿಕ ಅಂತರ ಬಹಳ ಮುಖ್ಯವಾಗಿರುತ್ತದೆ.

-ಎಲ್ಲ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಒಂದು ತಿಂಗಳ ಕಾಲ ಪ್ರತಿ ತರಗತಿಗೆ ಸಂಬಂಧಿಸಿದ ಅಧ್ಯಯನ ಸಾಮಗ್ರಿಯನ್ನು ವಾಟ್ಸ್ ಆ್ಯಪ್, ಇ ಮೇಲ್ ಅಥವಾ ಟೆಲಿಗ್ರಾಂ ಮೂಲಕ ಕಳಿಸಬೇಕು.

-ವಿಡಿಯೋ ಪಾಠಗಳು, ಪವರ್ ಪಾಯಂಟ್ ಪ್ರೆಸೆಂಟೇಶನ್, ಇ-ಪುಸ್ತಕ, ಇ-ನೋಟ್ಸ್, ಆಡಿಯೋ ಪುಸ್ತಕ, ಅಭ್ಯಾಸ ಪ್ರಶ್ನೆಗಳನ್ನು ಇತ್ಯಾದಿ ಅಧ್ಯಯನ ಸಾಮಗ್ರಿಯನ್ನು ಕಡ್ಡಾಯವಾಗಿ ಕಾಲೇಜ್ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News