ದೈಹಿಕ, ಮಾನಸಿಕ ಸ್ಟ್ರೋಕ್ ಆಗಿರೋದು ವಿಶ್ವನಾಥ್‍ಗೆ: ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ

Update: 2021-01-14 16:47 GMT

ಮೈಸೂರು,ಜ.14: ದೈಹಿಕ, ಮಾನಸಿಕ ಸ್ಟ್ರೋಕ್ ಆಗಿರೋದು ವಿಶ್ವನಾಥ್ ಗೆ, ಯಡಿಯೂರಪ್ಪ ಗೆ ಅಲ್ಲ ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದರು. 

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿತೆ ಮಾತನಾಡಿದ ಶಾಸಕ ಸಾ.ರಾ ಮಹೇಶ್, ಸ್ಟ್ರೋಕ್ ಆಗಿ ಮಲಗಿದ್ದಾಗ ನಿಮಗೆ ಚೈತನ್ಯ ತುಂಬಿದ್ದು ಜನತಾದಳ. ಆದರೆ ಪಕ್ಷಕ್ಕೆ ದ್ರೋಹ ಮಾಡಿದ್ದರ ಪರಿಣಾಮವನ್ನ ಈಗ ಎದುರಿಸಿದ್ದೀರಿ. ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಶಾಪಕ್ಕೆ ತುತ್ತಾಗಿ ಮಂತ್ರಿ ಸ್ಥಾನ ಕಳೆದುಕೊಂಡಿದ್ದೀರಿ. ಈಗ ಮತ್ತೆ ಯಡಿಯೂರು ಸಿದ್ದಲಿಂಗೇಶ್ವರರನ್ನು ಎಳೆಯಬೇಡಿ. ಈಗಿರುವ ವಿಧಾನಪರಿಷತ್ ಸ್ಥಾನವೂ ಹೋಗಿಬಿಡುತ್ತೆ ಎಂದು ಸಿಡಿ ಆರೋಪಕ್ಕೆ ತಿರುಗೇಟು ನೀಡಿದರು.

ವಿಶ್ವನಾಥ್ ಒಬ್ಬ ದುರಾಸೆ ಮನುಷ್ಯ. ಬರೀ ಶಾಸಕನಾದರೆ ಸಾಕು ಅಂತಾ ಅಂಗಲಾಚಿ ಜೆಡಿಎಸ್ ಸೇರಿದಿರಿ. ಶಾಸಕನಾದ ಮೇಲೆ ಮಂತ್ರಿ ಆಗಬೇಕು ಅನ್ನೋ ದುರಾಸೆ. ಜೆಡಿಎಸ್ ತೊರೆದು ಬಿಜೆಪಿ ಜೊತೆ ಹೋದಿರಿ. ಈಗ ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಯಡಿಯೂರಪ್ಪ ಅವರನ್ನು ಬೈಯುತ್ತಿದ್ದೀರಿ. ನಿಮಗ ಕೃತಜ್ಞತೆ ಅನ್ನೋದೇ ಇಲ್ಲ. ಯಾರು ನಿಮಗೆ ಸಹಾಯ ಮಾಡ್ತಾರೋ ಅವರನ್ನೇ ನಿಂದಿಸುವುದು ಜಾಯಮಾನ. ಮತ್ತೆ ದುರಾಸೆ ಮಾಡಿದರೆ ಈಗಿರೋ ಸ್ಥಾನವೂ ಹೋಗುತ್ತೆ ಹುಷಾರ್ ಎಂದು ಎಚ್.ವಿಶ್ವನಾಥ್ ಗೆ ಎಚ್ಚರಿಕೆ ನೀಡಿದರು.

ಸಿಎಂ ಸ್ಥಾನಕ್ಕೆ ಗೌರವವಿದೆ. ಅಂತಹ ಹುದ್ದೆಯಲ್ಲಿರೋರನ್ನ ಬ್ಲ್ಯಾಕ್‌ಮೇಲ್ ಮಾಡೋದು ಶೋಭೆಯಲ್ಲ. ಬಿಜೆಪಿ ಸೇರಿದಾಗ ನೀವೂ ಎಷ್ಟು ಕೋಟಿಗೆ ಸೇಲಾದಿರಿ ಅನ್ನೋದನ್ನು ಸ್ಪೀಕರ್ ಮುಂದೆಯೇ ಹೇಳಿದ್ದೇನೆ. ಈಗ ಯೋಗೇಶ್ವರ್ ಸೂಟ್ ಕೇಸ್ ಹೊತ್ಕೊಂಡ್ ಹೋದ್ರು ಎಂದು ಹೇಳ್ತಾ ಇದ್ದೀರಲ್ಲ, ಅದು ಯಾವ ಹಣ. ನಾನು ಹಿಂದೆ ಮಾಡಿದ ಆರೋಪ ಸರಿಯಾಗಿದೆ ಅಂತಾ ತಾನೇ. ನೀವೂ ಕೂಡ ಪಾರ್ಟ್ ಪೇಮೆಂಟ್ ಪಡೆದೇ ಮುಂಬೈಗೆ ಹೋಗಿದ್ದು ಎಂದು ಆಗಲೇ ಹೇಳಿದ್ದೆ. ವಿಶ್ವನಾಥ್ ಬೇರೊಬ್ಬರ ಮೇಲೆ ಆರೋಪ ಮಾಡುತ್ತಾ ತಾವೇ ಬಟಾ ಬಯಲಾಗುತ್ತಿದ್ದಾರೆ ಎಂದು ತಿರುಗೇಟು ನೀಡಿದರು. 

ಬಿಜೆಪಿ ಸರಕಾರ ಅವಧಿಗೆ ಮುನ್ನ ಬೀಳಲ್ಲ. ಜೆಡಿಎಸ್ ಗಿಂತ ಜಾಸ್ತಿ ದಿನ ನಾನು ಬಿಜೆಪಿಯನ್ನು ನೋಡಿದ್ದೇನೆ. ಯಡಿಯೂರಪ್ಪ ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರನ್ನು ಪ್ರೀತಿಯಿಂದ ಗೆಲ್ಲಬಹುದೇ ಹೊರತು, ಹೆದರಿಸಿ ಬೆದರಿಸಿ ಗೆಲ್ಲಲು ಆಗಲ್ಲ. ಬಿಜೆಪಿ ಸರ್ಕಾರ ಐದು ವರ್ಷಕ್ಕೆ ಮುಂಚೆ ಒಂದು ದಿನವೂ ಅಧಿಕಾರ ಬಿಡಲ್ಲ. ಯಡಿಯೂರಪ್ಪ ಯಾವತ್ತೂ ಮಾತು ತಪ್ಪಿಲ್ಲ. 17 ಮಂದಿ ಪೈಕಿ 15 ಮಂದಿಯನ್ನು ಮಂತ್ರಿ ಮಾಡಿದ್ದಾರೆ. ಮತ್ತಿಬ್ಬರಿಗೆ ಅವಕಾಶ ಸಿಕ್ಕಿಲ್ಲ. ಆದರೆ ನಿಮಗೆ ಕೃತಜ್ಞತೆ ಅನ್ನೋದೇ ಇಲ್ಲದ್ದಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅಷ್ಟೆ ಎಂದು ಬಿ.ಎಸ್.ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿ ವಿಶ್ವನಾಥ್ ವಿರುದ್ಧ  ಶಾಸಕ ಸಾ.ರಾ. ಮಹೇಶ್ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News