ಕೋವಿಡ್ ಲಸಿಕೆ ಬಿಡುಗಡೆ: ಪೋಲಿಯೊ ಲಸಿಕೆ ಅಭಿಯಾನ ಜನವರಿ 31ಕ್ಕೆ ಮುಂದೂಡಿಕೆ

Update: 2021-01-14 17:20 GMT

ಹೊಸದಿಲ್ಲಿ, ಜ. 14: ಜನವರಿ 16ರಂದು ರಾಷ್ಟ್ರಾದ್ಯಂತ ಕೋವಿಡ್ ಲಸಿಕೆ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೋಲಿಯೊ ಲಸಿಕೆ ದಿನಾಂಕವನ್ನು ಜನವರಿ 31ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ಹೇಳಿದೆ. ಪೋಲಿಯೊ ರಾಷ್ಟ್ರೀಯ ಲಸಿಕೆ ದಿನವನ್ನು ಈ ಹಿಂದೆ ಜನವರಿ 17ರಂದು ನಿಗದಿಪಡಿಸಲಾಗಿತ್ತು.

ಆದರೆ, ಕೋವಿಡ್ ನಿರ್ವಹಣೆ, ಕೋವಿಡೇತರ ಅಗತ್ಯದ ಆರೋಗ್ಯ ಸೇವೆಗಳು ಪರಸ್ಪರ ಪ್ರತಿಕೂಲ ಪರಿಣಾಮ ಬೀರದಂತೆ ಮುಂದುವರಿಸಲು ಪೋಲಿಯೊ ಲಸಿಕೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕಲ್ಯಾಣ ಸಚಿವಾಲಯ ತಿಳಿಸಿದೆ. ‘‘2021 ಜನವರಿ 16ರಂದು ದೇಶಾದ್ಯಂತ ಸಾಮೂಹಿಕ ಕೋವಿಡ್-19 ಲಸಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ.

ಇದು ಜಗತ್ತಿನ ಅತಿ ದೊಡ್ಡ ಲಸಿಕೆ ನೀಡಿಕೆ ಕಾರ್ಯಕ್ರಮ. ಆದುದರಿಂದ 2021 ಜನವರಿ 31ರ ವರೆಗೆ ರಾಷ್ಟ್ರೀಯ ಲಸಿಕೆ ದಿನಾಚರಣೆ ಅಥವಾ ‘ಪೋಲಿಯೊ ರವಿವಾರ್’ ಎಂದು ಕರೆಯಲಾಗುವ ಪೋಲಿಯೊ ಲಸಿಕೆ ದಿನಾಚರಣೆಯ ದಿನಾಂಕ ಮರು ನಿಗದಿ ನಿರ್ಧಾರವನ್ನು ಆರೋಗ್ಯ ಹಾಗೂ ಕಲ್ಯಾಣ ಸಚಿವಾಲಯ ರಾಷ್ಟ್ರಪತಿ ಅವರ ಕಚೇರಿಯೊಂದಿಗೆ ಸಮಾಲೋಚನೆ ನಡೆಸಿ ತೆಗೆದುಕೊಳ್ಳಲಾಯಿತು’’ ಎಂದು ಅದು ತಿಳಿಸಿದೆ. ಜನವರಿ 31ರಂದು ಬೆಳಗ್ಗೆ 11.45ಕ್ಕೆ ರಾಷ್ಟ್ರಪತಿ ಭವನದಲ್ಲಿ ಮಕ್ಕಳಿಗೆ ಪೋಲಿಯೊ ಹನಿ ನೀಡುವ ಮೂಲಕ ರಾಷ್ಟ್ರಪತಿ ಅವರು ಪೋಲಿಯೊ ರಾಷ್ಟ್ರೀಯ ಲಸಿಕೆಯನ್ನು ಉದ್ಘಾಟಿಸಲಿದ್ದಾರೆ ಎಂದ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News