17 ಶಾಸಕರು ಮತ್ತೊಮ್ಮೆ ಸಭೆ ಸೇರಲಿದ್ದೇವೆ: ನೂತನ ಸಚಿವ ಆರ್.ಶಂಕರ್

Update: 2021-01-14 17:39 GMT

ಮೈಸೂರು,ಜ,14: ನಾವು ಈಗ ಬಾಂಬೆ ಟೀಂ ಅಲ್ಲ, ಎಲ್ಲಾ ಬಿಜೆಪಿ ಟೀಂ. 17 ಮಂದಿ ಶಾಸಕರು ಅಗತ್ಯ ಬಿದ್ದರೆ ಮತ್ತೊಮ್ಮೆ ಸಭೆ ಸೇರಲಿದ್ದೇವೆ. ಆದರೆ ಅದು ಪಕ್ಷ ವಿರೋಧಿ ಚಟುವಟಿಕೆಯಲ್ಲ ಎಂದು ನೂತನ ಸಚಿವ ಆರ್.ಶಂಕರ್ ಹೇಳಿದ್ದಾರೆ.

ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಅವರು ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮುಂದಿನ ದಿನಗಳಲ್ಲಿ ನಮ್ಮ ಗುರು ಎಚ್.ವಿಶ್ವನಾಥ್, ಮುನಿರತ್ನಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಪಕ್ಷದ ಚೌಕಟ್ಟಿನಲ್ಲಿದ್ದಾಗ ಇತಿಮಿತಿಯೊಳಗೆ ಇರಬೇಕಾಗುತ್ತೆ. ನನಗೆ ಯಾವುದೇ ಖಾತೆ ನೀಡಿದರೂ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದರು.

ಸಚಿವ ನಾಗೇಶ್ ಗೆ ಸಂಪುಟ ದರ್ಜೆ ಸ್ಥಾನ ಮಾನ ನೀಡಿರುವುದು ಸ್ವಲ್ಪ ಸಮಾಧಾನ ತಂದಿದೆ. ಉಳಿದ ಇಬ್ಬರನ್ನು ಸಿಎಂ ಕೈ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.

ಕುರುಬರ ಎಸ್ಟಿ ಮೀಸಲಾತಿ ಹೋರಾಟ ವಿಚಾರ ಮಾತನಾಡಿದ ಅವರು, ಅಳದೆ ಇದ್ದರೆ ತಾಯಿ ಕೂಡ ಮಗುವಿಗೆ ಹಾಲು ನೀಡಲ್ಲ. ಹಾಗಾಗಿ, ಈ ಕುರಿತು ಸರ್ಕಾರದ ಗಮನ ಸೆಳೆಯಬೇಕು. ಇದು ಯಾರ ವಿರುದ್ಧವೂ ಹೋರಾಟವಲ್ಲ. ಈಶ್ವರಪ್ಪ ಹೋರಾಟದ ನೇತೃತ್ವ ವಹಿಸಿದ್ದಾರೆ. ನಾನು ಕುರುಬ ಸಮಾಜದ ಸಾಮಾನ್ಯ ವ್ಯಕ್ತಿಯಾಗಿ ಪಾಲ್ಗೊಳ್ಳುತ್ತೇನೆ ಎಂದರು.

ಮೊದಲು ರಾಜ್ಯ ಸರ್ಕಾರ ನಿಲುವು ಸ್ಪಷ್ಟ ಪಡಿಸಲಿ ಎಂಬ ಸಿದ್ದರಾಮಯ್ಯ ಸವಾಲಿಗೆ ಪ್ರತಿಕ್ರಿಯಿಸಿ, ಈಗ ನಾವು ಕುರುಬ ಸಮುದಾಯದ ನಾಲ್ಕು ಜನ ಮಿನಿಸ್ಟರ್ ಆಗಿದ್ದೇವೆ. ಕ್ಯಾಬಿನೆಟ್ ನಲ್ಲಿ ಈ ವಿಚಾರವನ್ನ ಪ್ರಸ್ತಾಪ ಮಾಡ್ತೀವಿ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News