ಬ್ಲಾಕ್‌ಮೇಲರ್‌ಗಳೇ ಸರಕಾರದ ಭಾಗವಾದರೆ ?

Update: 2021-01-15 05:14 GMT

ಮಕ್ಕಳನ್ನು ಅಪಹರಿಸಿ, ಒತ್ತೆಯಾಳಾಗಿಸಿ ಹಣಕ್ಕೆ ಬೇಡಿಕೆ ಇಡುವ ಕ್ರಿಮಿನಲ್‌ಗಳನ್ನು ನಾವು ನೋಡಿದ್ದೇವೆ. ಇದೀಗ ರಾಜಕಾರಣಿಗಳ ಮಾನವನ್ನೇ ಸಿಡಿಗಳಲ್ಲಿ ಸುತ್ತಿಟ್ಟು, ಮುಖ್ಯಮಂತ್ರಿಯನ್ನು ಬ್ಲಾಕ್‌ಮೇಲ್ ಮಾಡಿ ಸಚಿವ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುತ್ತಿರುವ ಆರೋಪಗಳನ್ನು ನಾವು ಕೇಳಬೇಕಾಗಿ ಬಂದಿದೆ. ಸುದೀರ್ಘ ಕಾಲದಿಂದ ನನೆಗುದಿಯಲ್ಲಿದ್ದ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮಸ್ಯೆಗಳನ್ನು ಪರಿಹರಿಸುವ ಬದಲು ಇನ್ನಷ್ಟು ಬಿಗಡಾಯಿಸಿದೆ. ಸಚಿವಾಕಾಂಕ್ಷಿಗಳು ಸರಕಾರದ ವಿರುದ್ಧ ಮುಗಿ ಬಿದ್ದಿದ್ದಾರೆ ಮಾತ್ರವಲ್ಲ, ಅದರ ಮಾನ, ಮರ್ಯಾದೆಗಳನ್ನು ಬಚ್ಚಿಟ್ಟುಕೊಂಡಿರುವ ಸಿಡಿಗಳನ್ನು ಕೈಯಲ್ಲಿ ಹಿಡಿದುಕೊಂಡು ದಿಲ್ಲಿಯ ವರಿಷ್ಠರಲ್ಲಿಗೆ ದೌಡಾಯಿಸಿದ್ದಾರೆ. ಈಗಾಗಲೇ ಶಾಸಕರೊಬ್ಬರು ‘ಶೀಘ್ರದಲ್ಲಿ ಸಿಡಿಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ. ಯತ್ನಾಳ್ ಅವರು ‘‘ಭ್ರಷ್ಟಾಚಾರದ ಕುರಿತ ಸಿಡಿಗಳು ಮಾತ್ರವಲ್ಲ, ನೋಡಲಾಗದ ಅಶ್ಲೀಲ ಸಿಡಿಗಳೂ ಶಾಸಕರ ಬಳಿ ಇವೆ’’ ಎಂದು ಆರೋಪಿಸಿದ್ದಾರೆ. ಈ ಸಿಡಿಗಳನ್ನು ಮುಂದಿಟ್ಟುಕೊಂಡು, ಸರಕಾರವನ್ನು ಬ್ಲಾಕ್‌ಮೇಲ್ ಮಾಡಿ ಹಲವರು ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಭಿನ್ನಮತೀಯರು ಮಾಧ್ಯಮಗಳಲ್ಲಿ ಈಗಾಗಲೇ ಹೇಳಿಕೆಗಳನ್ನು ನೀಡಿದ್ದಾರೆ.

‘ಹನಿ ಟ್ರಾಪ್’ ಮೂಲಕ ಈ ದೇಶದ ಸೇನಾಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡಿ ದೇಶದ ರಹಸ್ಯ ಮಾಹಿತಿಗಳನ್ನು ವಿದೇಶಿಗರು ತನ್ನದಾಗಿಸಿಕೊಳ್ಳುತ್ತಿರುವುದು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ಇದೀಗ ಈ ದೇಶದ ಶಾಸಕಾಂಗ ವ್ಯವಸ್ಥೆಯನ್ನೇ ಸಿಡಿಗಳ ಮೂಲಕ ಹೈಜಾಕ್ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ಈ ಆರೋಪಗಳಲ್ಲಿ ಹುರುಳಿದೆಯಾದರೆ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಪಾಲಿಗೆ ಇದು ಅತ್ಯಂತ ಆಘಾತಕಾರಿಯಾಗಿದೆ. ‘ಬ್ಲಾಕ್‌ಮೇಲ್’ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಇಲ್ಲಿ ‘ಆ ಮೂಲಕ ಸಚಿವ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ’ ಎನ್ನುವ ಆರೋಪ ಸ್ವತಃ ಬಿಜೆಪಿಯೊಳಗಿರುವ ನಾಯಕರಿಂದಲೇ ಕೇಳಿ ಬರುತ್ತಿವೆ. ಈ ಆರೋಪಗಳನ್ನು ವಿರೋಧ ಪಕ್ಷದ ನಾಯಕರು ಮಾಡುತ್ತಿರುವುದಲ್ಲ ಎನ್ನುವುದು ಗಮನಾರ್ಹ.

ಈ ಆರೋಪಗಳನ್ನು ಬಿಜೆಪಿಯ ಆಂತರಿಕ ವಿಷಯವೆಂದು ಕೈ ಬಿಡುವಂತಿಲ್ಲ. ಯಾಕೆಂದರೆ, ಬ್ಲಾಕ್‌ಮೇಲ್‌ನಂತಹ ಕ್ರಿಮಿನಲ್ ಕೃತ್ಯಕ್ಕೆ ಇಳಿದು ಸಚಿವ ಸ್ಥಾನ ಪಡೆದವರು ಈ ರಾಜ್ಯವನ್ನು ಆಳುತ್ತಾರೆನ್ನುವುದು ನಾಡಿನ ಅಳಿವು ಉಳಿವಿಗೆ ಸಂಬಂಧಿಸಿದ ವಿಷಯ. ಈ ಪ್ರಕರಣವನ್ನು ಬಿಜೆಪಿಯ ವರಿಷ್ಠರು ಇತ್ಯರ್ಥ ಪಡಿಸಬೇಕಾಗಿರುವುದಲ್ಲ. ಈ ದೇಶದ ನ್ಯಾಯಾಲಯ, ಕಾನೂನು ವ್ಯವಸ್ಥೆ ಇತ್ಯರ್ಥ ಪಡಿಸಬೇಕಾಗಿದೆ. ಆರೋಪ ಮಾಡುತ್ತಿರುವವರು ಜನಸಾಮಾನ್ಯರಿಂದ ಆಯ್ಕೆಯಾಗಿರುವ ಶಾಸಕರಾಗಿರುವುದರಿಂದ ಅದನ್ನು ಕಾನೂನು ವ್ಯವಸ್ಥೆ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ ಮಾತ್ರವಲ್ಲ, ತಕ್ಷಣ ಈ ಕುರಿತಂತೆ ತನಿಖೆಯೊಂದನ್ನು ನಡೆಸಲು ಮುಂದಾಗಬೇಕು. ಬ್ಲಾಕ್‌ಮೇಲ್ ಆರೋಪ ಮಾಡಿದವರು, ಆರೋಪ ಹೊತ್ತವರು ಮತ್ತು ಬ್ಲಾಕ್‌ಮೇಲ್‌ಗೆ ಒಳಗಾದವರನ್ನು ವಿಚಾರಣೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಮತ್ತು ಆರೋಪ ನಿಜವೇ ಆಗಿದ್ದರೆ, ಸಂಬಂಧ ಪಟ್ಟವರು ರಾಜಕಾರಣಿಗಳೇ ಆಗಿದ್ದರೂ ಅವರನ್ನು ಬಂಧಿಸಿ ಕಟಕಟೆಯಲ್ಲಿ ನಿಲ್ಲಿಸಬೇಕಾಗಿದೆ.

ಇಲ್ಲದೇ ಇದ್ದರೆ, ‘ಬ್ಲಾಕ್‌ಮೇಲರ್’ಗಳಿಂದ ಈ ರಾಜ್ಯ ಆಳಿಸಿಕೊಳ್ಳಬೇಕಾದಂತಹ ಮುಜುಗರದ ಸನ್ನಿವೇಶ ನಿರ್ಮಾಣವಾಗುತ್ತದೆ. ಇದೇ ಸಂದರ್ಭದಲ್ಲಿ, ಇಂತಹದೊಂದು ಆರೋಪಗಳನ್ನು ಮಾಡಿದ ಬಿಜೆಪಿಯ ಭಿನ್ನಮತೀಯ ಶಾಸಕರನ್ನು ನಾವು ಸಾಚಾಗಳೆಂದು ಭಾವಿಸಬೇಕಾಗಿಲ್ಲ. ಯಾಕೆಂದರೆ, ಮೊನ್ನೆಯವರೆಗೂ ಈ ಸಿಡಿಗಳ ಕುರಿತಂತೆ ವೌನವಾಗಿದ್ದವರು, ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂದಾಕ್ಷಣ ಇವರಿಗೆ ಸಿಡಿಗಳು ನೆನಪಾಗಿವೆ. ಒಂದು ವೇಳೆ ಸಚಿವ ಸ್ಥಾನ ಸಿಕ್ಕಿದ್ದರೆ ಇವರೆಲ್ಲ ಆ ಸಿಡಿಗಳನ್ನು ತಮ್ಮ ತಮ್ಮ ಕುತ್ತಿಗೆಗಳಲ್ಲಿ ಪದಕಗಳ ರೂಪದಲ್ಲಿ ಧರಿಸಿ ಓಡಾಡುತ್ತಿದ್ದರು. ಇವರೇ ಆರೋಪಿಸಿದಂತೆ ಸಚಿವ ಸ್ಥಾನ ಪಡೆದವರು ಸಿಡಿಗಳನ್ನು ತೋರಿಸಿ ಬ್ಲಾಕ್ ಮೇಲ್ ಮಾಡಿದವರೇ ಇರಬಹುದು. ಆದರೆ ಇದೀಗ ಈ ಅತೃಪ್ತ ಶಾಸಕರೂ ಅದೇ ಸಿಡಿಗಳನ್ನು ಮುಂದಿಟ್ಟು ಮುಖ್ಯಮಂತ್ರಿಯನ್ನು ಮತ್ತು ವರಿಷ್ಠರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ . ‘ಶೀಘ್ರದಲ್ಲೇ ಸಿಡಿ ಬಿಡುಗಡೆಯಾಗಲಿದೆೆ’ ಎಂಬ ಎಚ್. ವಿಶ್ವನಾಥ್ ಅವರ ಧ್ವನಿಯಲ್ಲೇ ‘‘ಬ್ಲಾಕ್‌ಮೇಲ್’’ ಬೆದರಿಕೆಯಿದೆ.

ಸಚಿವ ಸ್ಥಾನ ನೀಡದೇ ಇದ್ದರೆ ಈ ಸಿಡಿಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಯನ್ನು ಇವರು ಎಚ್ಚರಿಸಿದ್ದಾರೆ. ಆದುದರಿಂದ ಇವರ ಮೇಲೂ ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಮುಖ್ಯವಾಗಿ ಯಡಿಯೂರಪ್ಪ ಅವರು ಈ ಆರೋಪಗಳಿಗೆ ಉತ್ತರಿಸಬೇಕಾಗಿದೆ. ಯಾಕೆಂದರೆ, ಈ ಆರೋಪದ ಮೊದಲ ಬಲಿ ಯಡಿಯೂರಪ್ಪ ಅವರೇ ಆಗಿದ್ದಾರೆ. ಬ್ಲಾಕ್‌ಮೇಲ್‌ಗೊಳಗಾಗಿ ಸಚಿವ ಸ್ಥಾನವನ್ನು ಹಂಚಲಾಗಿದೆ ಎನ್ನುವುದು ಮುಖ್ಯಮಂತ್ರಿ ಸ್ಥಾನಕ್ಕೆ ಮಾಡುವ ಅವಮಾನವಾಗಿದೆ. ಆದುದರಿಂದ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆಯುವುದು ಮಾತ್ರವಲ್ಲ, ಆರೋಪ ಮಾಡಿದವರ ಮೇಲೆ ಕ್ರಿಮಿನಲ್ ದೂರನ್ನು ದಾಖಲಿಸಬೇಕು. ಪಕ್ಷದೊಳಗೂ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು. ಇಷ್ಟು ಮಾಡದೇ ಇದ್ದರೆ, ಆರೋಪಗಳನ್ನು ಸ್ವತಃ ಯಡಿಯೂರಪ್ಪ ಅವರೇ ಒಪ್ಪಿದಂತಾಯಿತು. ಹಾಗೆಯೇ ನೂತನವಾಗಿ ಆಯ್ಕೆಯಾದ ಎಲ್ಲ ಸಚಿವರೂ ಈ ಆರೋಪಗಳಿಂದ ಕಳಂಕಿತರಾಗಿದ್ದಾರೆ. ಅವರೂ ಈ ಬಗ್ಗೆ ಪ್ರತಿಕ್ರಿಯಿಸಬೇಕಾಗಿದೆ.

ಒಂದಂತೂ ನಿಜ. ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಯಡಿಯೂರಪ್ಪ ಅವರನ್ನು ಬಹುಕಾಲ ಸತಾಯಿಸಲಾಗಿದೆ. ಯಡಿಯೂರಪ್ಪ ಅವರಿಗೆ ಮುಜುಗರ ಉಂಟು ಮಾಡುವುದಕ್ಕಾಗಿಯೇ ವರಿಷ್ಠರು ಸಚಿವರ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಯಡಿಯೂರಪ್ಪರ ಬೇಡಿಕೆಗಳನ್ನು ವರಿಷ್ಠರು ಪೂರ್ಣವಾಗಿ ಈಡೇರಿಸಿಲ್ಲ ಮತ್ತು ಈಗ ಸೃಷ್ಟಿಯಾಗಿರುವ ಭಿನ್ನಮತವನ್ನು ಬಿಜೆಪಿಯೊಳಗಿರುವ ಯಡಿಯೂರಪ್ಪ ವಿರೋಧಿ ಬಣಗಳು ಸಂಭ್ರಮಿಸುತ್ತಿವೆ. ಅವರೆಲ್ಲ ಏನು ಸಂಭವಿಸಬೇಕು ಎಂದು ನಿರೀಕ್ಷಿಸಿದ್ದರೋ ಅದೇ ಸಂಭವಿಸುತ್ತಿದೆ. ಆದುದರಿಂದಲೇ, ಸಂಪುಟ ವಿಸ್ತರಣೆಯಿಂದ ಉಂಟಾದ ಎಲ್ಲ ಪರಿಣಾಮಗಳನ್ನು ಯಡಿಯೂರಪ್ಪ ವರಿಷ್ಠರ ತಲೆಗೆ ಕಟ್ಟಿದ್ದಾರೆ. ‘‘ದೂರುಗಳಿದ್ದರೆ ವರಿಷ್ಠರಿಗೆ ತಿಳಿಸಿ’’ ಎಂದು ದಿಲ್ಲಿಯ ಕಡೆಗೆ ಕೈ ತೋರಿಸಿದ್ದಾರೆ. ಆದರೆ ದಿಲ್ಲಿಯಲ್ಲಿ ಇದು ಇತ್ಯರ್ಥವಾಗುವ ಯಾವ ಲಕ್ಷಣಗಳೂ ಇಲ್ಲ. ಒಟ್ಟಿನಲ್ಲಿ ಸಂಪುಟ ವಿಸ್ತರಣೆ ಸರಕಾರವನ್ನು ಗಟ್ಟಿಗೊಳಿಸುವ ಬದಲು ಇನ್ನಷ್ಟು ದುರ್ಬಲವಾಗಿಸಿದೆ. ‘ಬ್ಲಾಕ್‌ಮೇಲರ್’ಗಳಿಂದ ಆಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ನಾಡಿನ ಜನತೆಗೆ ತಂದಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News