ದಿಲ್ಲಿಯಲ್ಲಿ ವರಿಷ್ಠರನ್ನು ಭೇಟಿಯಾದ ಎಂ.ಪಿ.ರೇಣುಕಾಚಾರ್ಯ: 'ಭ್ರಷ್ಟ'ರನ್ನು ಸಚಿವ ಸಂಪುಟದಿಂದ ಕೈಬಿಡಲು ಮನವಿ

Update: 2021-01-15 12:01 GMT
Photo: twitter.com/MPRBJP

ಬೆಂಗಳೂರು, ಜ. 15: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಮಂತ್ರಿ ಸ್ಥಾನ ಕೈತಪ್ಪಿದ ಆಕಾಂಕ್ಷಿಗಳು ವರಿಷ್ಠರಿಗೆ ದೂರು ನೀಡಿದ್ದಾರೆ. ಸಿಡಿ, ಬ್ಲ್ಯಾಕ್‍ಮೇಲ್ ಆರೋಪದ ಜೊತೆಗೆ ಇದೀಗ ನೂತನ ಸಚಿವ ಸಿ.ಪಿ.ಯೋಗೇಶ್ವರ್ ಅವರ ‘ಸಾಲ'ದ ಕುರಿತ ಚರ್ಚೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ.

‘ಸಿ.ಪಿ.ಯೋಗೇಶ್ವರ್ 9 ಕೋಟಿ ರೂ. ಸಾಲ ಮಾಡಿ ನಮ್ಮೆಲ್ಲರನ್ನು ಒಗ್ಗೂಡಿಸಿದರು' ಎಂದು ಹೇಳುವ ಮೂಲಕ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಿಪಿವೈಗೆ ಸಚಿವ ಸ್ಥಾನ ನೀಡಿದ್ದನ್ನು ಸಮರ್ಥಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ‘ಕೋಟ್ಯಂತರ ರೂ. ಆಸ್ತಿ ಹೊಂದಿರುವ ಯೋಗೇಶ್ವರ್ ಸಾಲವನ್ನೇಕೆ ಮಾಡುತ್ತಾರೆ' ಎಂದು ಪ್ರಶ್ನಿಸಿದ್ದಾರೆ.

ಶುಕ್ರವಾರ ಹೊಸದಿಲ್ಲಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಖುದ್ದು ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾತನಾಡಿದ ರೇಣುಕಾಚಾರ್ಯ, ‘ಯೋಗೇಶ್ವರ್ ಗೆ ಬಿಡದಿಯಲ್ಲಿ 50 ಕೋಟಿ ರೂ.ಆಸ್ತಿ ಇದೆ. 4 ಐಷಾರಾಮಿ ಕಾರುಗಳಿವೆ, ಹೊಸ ಬಂಗಲೆ ಖರೀದಿ ಮಾಡಿದ್ದಾರೆ. ಅವರೇಕೆ 9 ಕೋಟಿ ರೂ.ಸಾಲ ಮಾಡಿದ್ದರು' ಎಂದು ಕೇಳಿದರು.

ಯೋಗೇಶ್ವರ್ ಅವರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಿಲ್ಲ. ಕಾಂಗ್ರೆಸ್-ಜೆಡಿಎಸ್ ಶಾಸಕರು ಯೋಗೇಶ್ವರ್ ಅವರ ಮುಖ ನೋಡಿ ಬಿಜೆಪಿ ಸೇರ್ಪಡೆಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸುಖಾಸುಮ್ಮನೆ 9 ಕೋಟಿ ರೂ.ಸಾಲ ಮಾಡಿ, ಮನೆ ಮಾರಾಟ ಮಾಡಿ ಸಹಕಾರ ನೀಡಿದ್ದಾರೆ ಎಂಬುದು ಸುಳ್ಳು ಎಂದು ಆಕ್ಷೇಪಿಸಿದರು.

ಸೋತ ವ್ಯಕ್ತಿಯನ್ನು ಸಚಿವನನ್ನಾಗಿ ಮಾಡಿದರೆ ಜನರಿಂದ ಆಯ್ಕೆಯಾದವರಿಗೆ ಅವಮಾನ ಮಾಡಿದಂತೆ. ಹೀಗಾಗಿ ಅವರಿಗೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ರೇಣುಕಾಚಾರ್ಯ, ಯೋಗೇಶ್ವರ್ ಅವರನ್ನು ಸಮರ್ಥಿಸಲು ರಮೇಶ್ ಜಾರಕಿಹೊಳಿ ಅವರೇನು ಬಿಜೆಪಿ ವಕ್ತಾರರಲ್ಲ ಅಥವಾ ಮುಖ್ಯಮಂತ್ರಿಯೂ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಭ್ರಷ್ಟರನ್ನು ಸಂಪುಟದಿಂದ ಕೈಬಿಡಿ: ಭಷ್ಟಾಚಾರದ ಆರೋಪ ಎದುರಿಸುತ್ತಿರುವ ನೂತನ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಲು ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕೆಂದು ಎಂ.ಪಿ.ರೇಣುಕಾಚಾರ್ಯ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರು ನೀಡಿದರು.

ಇದೇ ವೇಳೆ ಯೋಗೇಶ್ವರ್ ನಡೆಸಿದ್ದಾರೆ ಎನ್ನಲಾದ ಅಕ್ರಮಗಳ ಬಗ್ಗೆ ದಾಖಲೆಗಳನ್ನು ನೀಡಿದರು. ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಅರುಣ್ ಸಿಂಗ್ ಜೊತೆ ಮುಕ್ತ ಮಾತುಕತೆ ನಡೆಸಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಚರ್ಚೆ ನಡೆಸಿದ ಅವರು, ಗಂಭೀರ ಆರೋಪ ಎದುರಿಸುತ್ತಿರುವ ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾ ಮಾಡಲು ಸಿಎಂಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.

ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆಯೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಯೋಗೇಶ್ವರ್ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ ಗಂಭೀರ ಸ್ವರೂಪದ ದೂರು ದಾಖಲಾಗಿದೆ. ಇಂಥವರನ್ನು ಇಟ್ಟುಕೊಂಡರೆ ಸರಕಾರಕ್ಕೆ ಶೋಭೆಯಲ್ಲ. ಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಒಂದು ವೇಳೆ ತಡೆಯಾಜ್ಞೆ ತೆರವಾದರೆ ಯಾವುದೇ ಕ್ಷಣದಲ್ಲಿ ತೊಂದರೆಗೆ ಒಳಗಾಗಬಹುದು. ಇಂತವರಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ರಾಜೀನಾಮೆ ನೀಡಬೇಕು: ಸಿ.ಪಿ.ಯೋಗೇಶ್ವರ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ನೈತಿಕತೆ ಇದ್ದರೆ ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಬಿಜೆಪಿ ಅಧಿಕಾರಕ್ಕೆ ಬರಲು ಯೋಗೇಶ್ವರ್ ಮಾತ್ರ ಕಾರಣವಲ್ಲ. ಪ್ರಧಾನಿ ಹಾಗೂ ಮುಖ್ಯಮಂತ್ರಿ ಮುಖ ನೋಡಿಕೊಂಡು ಜನ ಮತ ಹಾಕಿದ್ದಾರೆ. ಯೋಗೇಶ್ವರ್ ನೋಡಿ ಯಾರು ಮತ ಹಾಕಿದ್ದಾರೆ ಎಂದು ಪ್ರಶ್ನಿಸಿದರು.

ಮಧ್ಯ ಕರ್ನಾಟಕದ ರಾಜಧಾನಿ ದಾವಣಗೆರೆ ಜಿಲ್ಲೆಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕೊಡಬೇಕೆಂಬುದೇ ಅಲ್ಲಿನ ಜನರ ಒತ್ತಾಸೆಯಾಗಿದೆ. ನನಗೆ ಮಂತ್ರಿ ಸ್ಥಾನ ಕೊಡಿ ಎಂದು ಬೇಡಿಕೆ ಇಟ್ಟಿಲ್ಲ. ಪಕ್ಷಕ್ಕೆ ದುಡಿದವರು, ಪಕ್ಷ ನಿಷ್ಠರು, ಹಿರಿಯರಿಗೆ ಕೊಡಬೇಕು. ಕರಾವಳಿ, ಕಲ್ಯಾಣ ಕರ್ನಾಟಕ, ಮಧ್ಯಕರ್ನಾಟಕ ಭಾಗಕ್ಕೂ ಸೂಕ್ತ ಸ್ಥಾನಮಾನ ನೀಡಬೇಕು ಎಂದು ರೇಣುಕಾಚಾರ್ಯ ತಿಳಿಸಿದರು.

‘ನಾವು ಯಾವುದೇ ಭಿನ್ನಮತೀಯ ಚಟುವಟಿಕೆ ನಡೆಸುತ್ತಿಲ್ಲ. ಬಿಜೆಪಿ ಪಕ್ಷ ನಮ್ಮ ತಾಯಿ ಸಮಾನ, ಮುಖ್ಯಮಂತ್ರಿ ಯಡಿಯೂರಪ್ಪನವರ ನಮ್ಮ ತಂದೆ ಸಮಾನ. ನಮಗೆ ನೋವಾಗಿರುವುದು ನಿಜ. ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದೇವೆ ಅಷ್ಟೇ. ಸರಿಪಡಿಸುವ ಭರವಸೆಯನ್ನು ವರಿಷ್ಠರು ನೀಡಿದ್ದಾರೆ'

-ಎಂ.ಪಿ.ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News