'ಸಿಡಿ' ಆರೋಪದ ಬಗ್ಗೆ ನೂತನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದೇನು ?

Update: 2021-01-15 12:08 GMT

ಬೆಂಗಳೂರು,ಜ. 15: ಕೆಲ ಶಾಸಕರು ಆರೋಪಿಸಿರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಯಾವುದೇ ಸಿಡಿ ಯಾರ ಬಳಿಯೂ ಇಲ್ಲ. ಇದು ನೂರಕ್ಕೆ 100ರಷ್ಟು ಸುಳ್ಳು ಎಂದು ನೂತನ ಸಚಿವ ಮುರುಗೇಶ್ ಆರ್.ನಿರಾಣಿ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಗೆ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವರು ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನಗೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂಬಂಧಿಸಿದ ಸಿಡಿ ಇದೆ ಎಂದು ಕಟ್ಟುಕಥೆ ಹೇಳುತ್ತಿದ್ದು, ಅಂತಹ ಯಾವುದೇ ಸಿಡಿ ಯಾರೊಬ್ಬರ ಬಳಿಯೂ ಇಲ್ಲ ಎಂದರು.

ಮಂತ್ರಿ ಸ್ಥಾನ ಸಿಗದೆ ಇರುವವರು ಅನಗತ್ಯವಾಗಿ ನಾಯಕತ್ವದ ವಿರುದ್ಧ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುವುದು ಬೇಡ. ಪಕ್ಷ ಮತ್ತು ಸಿಎಂ ವಿರುದ್ಧ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ. ಏನೇ ಸಮಸ್ಯೆಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಇರಬೇಕೆ ಹೊರತು ಹಾದಿಬೀದಿಯಲ್ಲಿ ಮಾತನಾಡುವುದರಿಂದ ಯಾವುದೇ ಸರಿಯಲ್ಲ ಎಂದು ಮುರುಗೇಶ್ ನಿರಾಣಿ ಆಕ್ಷೇಪಿಸಿದರು.

ಒತ್ತಡ ಸರಿಯಲ್ಲ: ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2‘ಎ'ಗೆ ಸೇರಿಸಲು ನಡೆಸುತ್ತಿರುವ ಪಾದಯಾತ್ರೆಯ ಹಿಂದೆ ಯಾರಿದ್ದಾರೆಂದು ನಾನು ಹೇಳುವುದಿಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಮುರುಗೇಶ್ ನಿರಾಣಿ, ಜಯಮೃಂತ್ಯುಜಯ ಸ್ವಾಮಿ ವಿರುದ್ಧ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದರು.

ನಾನು ಈ ಹಿಂದೆ ಪಾದಯಾತ್ರೆ ಕೈಬಿಡಿ ಎಂದು ಶ್ರೀಗಳಿಗೆ ಮನವಿ ಮಾಡಿದ್ದೆ. ಬಳಿಕ ಸಿ.ಸಿ.ಪಾಟೀಲ್ ಶ್ರೀಗಳಿಗೆ ಪಾದಯಾತ್ರೆ ನಡೆಸದಂತೆ ಮನವಿ ಮಾಡಿದ್ದರು. ನಾವು ಶ್ರೀಗಳಿಗೆ ಹೇಳುವಷ್ಟು ದೊಡ್ಡವರಲ್ಲ ಎಂದ ಅವರು, ಏಕಾಏಕಿ ಪಾದಯಾತ್ರೆ ಮಾಡಿ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಡ ಹಾಕುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಈಗಾಗಲೇ ಸಿಎಂ ಬಿಎಸ್‍ವೈ ನಮ್ಮ ಸಮುದಾಯವನ್ನು 2ಎಗೆ ಸೇರಿಸಲು ಒಪ್ಪಿಗೆ ನೀಡುವ ಭರವಸೆ ನೀಡಿದ್ದಾರೆ. ಅವರ ಮಾತಿನಲ್ಲಿ ಎಲ್ಲರೂ ನಂಬಿಕೆ ಇಡಬೇಕು. ಶ್ರೀಗಳು ತಕ್ಷಣವೇ ಪಾದಯಾತ್ರೆ ರದ್ದು ಮಾಡಬೇಕೆಂದು ಅನೇಕ ಮುಖಂಡರು ಮನವಿ ಮಾಡಿದ್ದೇವೆ. ಯಾರೋ ಅವಕಾಶ ಸಿಗದವರು ಅವರಿಗೆ ಬೆಂಬಲ ನೀಡುತ್ತಿದ್ದಾರೆಂದು ಯತ್ನಾಳ್ ವಿರುದ್ಧ ಪರೋಕ್ಷ ಟೀಕೆ ಮಾಡಿದರು.

ಆಲಂ ಪಾಷ ಓರ್ವ ವಂಚಕ: ಈ ಹಿಂದೆ ನಾನು ಕೈಗಾರಿಕೆ ಸಚಿವನಾಗಿದ್ದಾಗ ಉದ್ಯಮಿ ಆಲಂ ಪಾಷಗೆ ಜಮೀನು ಹಂಚಿಕೆ ಮಾಡಲಾಗಿದೆ. ಅವರಿಗೆ ಹಣ ಕಟ್ಟಲು ಸಮಯ ನೀಡಲಾಗಿತ್ತು. ನಿಗದಿತ ಸಮಯದಲ್ಲಿ ಹಣ ಕಟ್ಟಲು ಸಾಧ್ಯವಾಗಲಿಲ್ಲ. ಸಮಯ ವ್ಯರ್ಥ ಮಾಡಿ ಜಮೀನು ಹೊಡೆಯಲು ಯತ್ನಿಸಿದರು ಎಂದು ನಿರಾಣಿ ವಾಗ್ದಾಳಿ ನಡೆಸಿದರು.

ಆ ಜಮೀನು ಕೆಐಎಡಿಬಿ ಅಧೀನದಲ್ಲಿಯೇ ಇದೆ. ಕಾನೂನು ಪ್ರಕಾರ ಹಣ ಕಟ್ಟಿದ್ದರೆ ಜಮೀನು ನೀಡಲಾಗುತ್ತದೆ. ನಿಗದಿತ ಸಮಯದಲ್ಲಿ ಹಣ ಕಟ್ಟಲಿಲ್ಲ ಎಂಬ ಕಾರಣಕ್ಕೆ ಜಮೀನು ನೀಡಿಲ್ಲ. ಆಲಂ ಪಾಷ ಓರ್ವ ವಂಚಕ. ಆತ ಬ್ಲ್ಯಾಕ್‍ಮೇಲ್ ಮಾಡುವುದರಲ್ಲಿ ಎತ್ತಿದ ಕೈ ಎಂದು ನಿರಾಣಿ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News