ಯತ್ನಾಳ್​ಗೆ ನೀಡಿದ್ದ ವಿಶೇಷ ಭದ್ರತೆ ವಾಪಸ್ ಪಡೆದ ರಾಜ್ಯ ಸರಕಾರ

Update: 2021-01-15 13:16 GMT

ವಿಜಯಪುರ, ಜ.15: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಿದ್ದ ವಿಶೇಷ ವೈಯಕ್ತಿಕ ಭದ್ರತೆಯನ್ನು ರಾಜ್ಯ ಸರಕಾರ ವಾಪಸ್ ಪಡೆದಿದ್ದು, ಸರಕಾರದ ಕ್ರಮಕ್ಕೆ ಯತ್ನಾಳ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸಿಎಂ ಯಡಿಯೂರಪ್ಪ, ಗೃಹ ಸಚಿವ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ನಾನು ಸಿಎಂ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ದ್ವೇಷದ ರಾಜಕೀಯ ಮಾಡಲಾಗುತ್ತಿದೆ. ನಿಮ್ಮ ಹಳೆಯ ಸೇಡಿನ ರಾಜಕೀಯಕ್ಕೆ ಈ ಕ್ರಮ ವಹಿಸಿದ್ದೀರಿ. ಇದು ನಿಮ್ಮ ಹಳೆ ಚಾಳಿ, ವಿಕೃತ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಕಿಡಿಕಾರಿದ್ದಾರೆ.

ನಾನು ಪ್ರಖರ ಹಿಂದುತ್ವವಾದಿ. ನನ್ನ ಮೇಲೆ ಸಾಕಷ್ಟು ಬಾರಿ ದಾಳಿಗೆ ಸಂಚು ನಡೆದಿತ್ತು. ನನ್ನ ಜನಪರ ನಿಲುವಿನ ಹೋರಾಟದಿಂದಾಗಿ ಕೆಲವರು ದಾಳಿಗೆ ಸಂಚು ರೂಪಿಸಿದ್ದರು. ಇದನ್ನು ಅರಿತ ಸರ್ಕಾರ ಆವತ್ತು ನನಗೆ ಭದ್ರತೆ ನೀಡಿತ್ತು. ಆದರೆ ತಮ್ಮ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ಬಿಎಸ್‌ವೈ ಭದ್ರತೆ ವಾಪಸ್ ಪಡೆದಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

ನಾನು ನಿಮ್ಮ ಭದ್ರತೆಯನ್ನು ನಂಬಿಕೊಂಡು ಹೋರಾಟ ಮಾಡುತ್ತಿಲ್ಲ. ನಿಮ್ಮ ಈ ಕ್ರಮದಿಂದ ನನ್ನ ಹೋರಾಟ ನಿಲ್ಲುವುದಿಲ್ಲ. ಮುಂದೆ ನನ್ನ ಮೇಲೆ ಏನೇ ಅಹಿತಕರ ಘಟನೆಗಳಾದರೆ ಅದಕ್ಕೆ ನೀವೇ ಹೊಣೆ ಎಂದು ಅವರು ಪತ್ರದಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News