ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ತಾಯಿ, ಮಗಳು ಮೃತ್ಯು

Update: 2021-01-15 14:06 GMT

ಮಡಿಕೇರಿ, ಜ.15: ನಿಯಂತ್ರಣ ಕಳೆದುಕೊಂಡ ಕಾರೊಂದು ಹೆದ್ದಾರಿ ಬದಿಯಲ್ಲಿದ್ದ ಎಸ್ಟೇಟ್ ವೊಂದರ ಕೆರೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ತಾಯಿ ಹಾಗೂ ಮಗಳು ಜಲ ಸಮಾಧಿಯಾದ ಘಟನೆ ಮಡಿಕೇರಿ ಸುಂಟಿಕೊಪ್ಪ ರಾಷ್ಟ್ರೀಯ ಹೆದ್ದಾರಿ 275ರ ಬಾಳೆಕಾಡ್ ಬಳಿ ನಡೆದಿದೆ.

ಕುಶಾಲನಗರ ಮೂಲದ ಬವಿತ (ತಾಯಿ) ಮತ್ತು ಪಲ್ಲವಿ(ಮಗಳು) ಎಂಬವರೇ ಮೃತಪಟ್ಟವರಾಗಿದ್ದು, ಕಾರನ್ನು ಚಲಾಯಿಸುತ್ತಿದ್ದ ವೆಂಕಟೇಶ್ ನೀರಿನಲ್ಲಿ ಈಜಿ ದಡ ಸೇರುವ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕರ ಸಂಕ್ರಾತಿಯ ದಿನ ರಾತ್ರಿ 9.15 ಗಂಟೆಗೆ ಈ ದುರಂತ ಸಂಭವಿಸಿದ್ದು, ಘಟನೆ ಕುರಿತು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಕುಶಾಲನಗರ ನಿವಾಸಿಯಾದ ವೆಂಕಟೇಶ್ ಮಡಿಕೇರಿ ಅರಣ್ಯ ಇಲಾಖೆ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದು, ಜ.14ರಂದು ಪತ್ನಿ ಬವಿತ (42) ಮತ್ತು ಮಗಳು ಪಲ್ಲವಿ (13) ಅವರ ಜೊತೆ ಕುಶಾಲನಗರದಿಂದ ತಮ್ಮ ಆಲ್ಟೋ ಕಾರಿನಲ್ಲಿ ಪುತ್ತೂರು ಕಡೆ ತೆರಳಿದ್ದರು. ಬಳಿಕ ಮಡಿಕೇರಿ ಸುಂಟಿಕೊಪ್ಪ ಮಾರ್ಗವಾಗಿ ಪುತ್ತೂರಿನಿಂದ ಕುಶಾಲನಗರದ ಕಡೆ ತೆರಳುತ್ತಿದ್ದರು. ಈ ಸಂದರ್ಭ ರಾತ್ರಿ 9.15ರ ಸಮಯದಲ್ಲಿ ಬಾಳೆಕಾಡು ತಿರುವಿನಲ್ಲಿ ಕಾರು ಚಾಲಕ ವೆಂಕಟೇಶ್ ಅವರ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಯಲ್ಲಿದ್ದ ಕೆರೆಗೆ ಬಿದ್ದಿದೆ. 

ಭಾರೀ ಶಬ್ದ ಕೇಳಿ ಬಂದ ಹಿನ್ನಲೆಯಲ್ಲಿ ತೋಟದ ವ್ಯವಸ್ಥಾಪಕ ಪ್ರಸನ್ನ ಕುಮಾರ್ ಅವರು ಸ್ಥಳಕ್ಕೆ ಬಂದು ನೋಡಿದಾಗ ಕಾರು ಕೆರೆಗೆ ಬಿದ್ದಿರುವುದು ಕಂಡು ಬಂದಿದೆ. ಈ ಸಂದರ್ಭ ಕಾರಿನಲ್ಲಿದ್ದ ವೆಂಕಟೇಶ್ ಅವರು ಈಜಿ ದಡ ಸೇರಿದ್ದು, ಅವರನ್ನು ವಿಚಾರಿಸಿದ ಸಂದರ್ಭ ಕಾರಿನ ಒಳಗೆ ಪತ್ನಿ ಬಬಿತ ಮತ್ತು ಮಗಳು ಪಲ್ಲವಿ ಅವರು ಇರುವುದಾಗಿ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ತೋಟದ ವ್ಯವಸ್ಥಾಪಕ ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ತದನಂತರ ತೋಟ ಕಾರ್ಮಿಕರಾದ ಅಶೋಕ ಮತ್ತು ಬಾಲಕೃಷ್ಣ ಅವರು ಪೊಲೀಸರ ಸಹಾಯದಿಂದ ಕ್ರೇನ್ ಮೂಲಕ ಕಾರನ್ನು ಮೇಲೆತ್ತಿ ಕಾರಿನಲ್ಲಿದ್ದ ಬವಿತ ಮತ್ತು ಪಲ್ಲವಿ ಅವರುಗಳ ಮೃತದೇಹವನ್ನು ಹೊರ ತೆಗೆದಿದ್ದಾರೆ. ಬಳಿಕ ಮೃತ ದೇಹಗಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಘಟನೆಯ ಬಗ್ಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News