'ಸಿ.ಪಿ.ಯೋಗೇಶ್ವರ್ 9 ಕೋಟಿ ರೂ.ಸಾಲ' ಹೇಳಿಕೆ: ಸಮಗ್ರ ತನಿಖೆಗೆ ಸಲೀಂ ಅಹ್ಮದ್ ಒತ್ತಾಯ

Update: 2021-01-15 14:12 GMT

ಬೆಂಗಳೂರು, ಜ. 15: ಬಿಜೆಪಿ ಸರಕಾರ ರಚನೆ ವೇಳೆ ಸಿ.ಪಿ.ಯೋಗೇಶ್ವರ್ ಅವರು 9 ಕೋಟಿ ರೂ. ಸಾಲ ಮಾಡಿದ್ದರು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಆಪರೇಷನ್ ಕಮಲ ನಡೆಸಿದ್ದು, ದೊಡ್ಡ ಪ್ರಮಾಣದಲ್ಲಿ ಹಣದ ವಹಿವಾಟು ನಡೆದಿದೆ. ಹಣ ಕೊಟ್ಟು ಶಾಸಕರನ್ನು ಖರೀದಿ ಮಾಡಲಾಗಿದೆ ಎಂದು ನಾವು ಆರೋಪಿಸಿದ್ದೆವು. ಇದೀಗ ಈ ಬಗ್ಗೆ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಆದರೂ ಬಿಜೆಪಿ ಯಾವುದೇ ಹಣದ ವಹಿವಾಟು ನಡೆದಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಜಲಸಂಪನ್ಮೂಲ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದು, ನಾವೆಲ್ಲ ಮುಂಬೈಯಲ್ಲಿ ಸುತ್ತಾಡುವ ವೇಳೆ ನಮ್ಮನ್ನು ಒಟ್ಟುಗೂಡಿಸುವ ಸಂದರ್ಭದಲ್ಲಿ ಸಿ.ಪಿ.ಯೋಗೇಶ್ವರ್ 9 ಕೋಟಿ ರೂ.ಸಾಲ ಮಾಡಿದ್ದರು ಎಂದಿದ್ದಾರೆ. ಆ ಮೂಲಕ ಸರಕಾರ ರಚನೆ ವೇಳೆ ಹಣಕಾಸಿನ ವಹಿವಾಟು ನಡೆದಿರುವುದು ಮತ್ತೊಮ್ಮೆ ದೃಢಪಟ್ಟಿದೆ ಎಂದು ಹೇಳಿದರು.

ಈ ಹಣವನ್ನು ಯಾರೂ ಯಾರಿಗೆ ಕೊಟ್ಟರು, ಯಾವಾಗ ಕೊಡಲಾಯಿತು ಎಂಬ ಕುರಿತು ಸಮಗ್ರ ತನಿಖೆಯಾಗಬೇಕು. ಸಂಪುಟ ವಿಸ್ತರಣೆಯ ಬಳಿಕ ಹಣಕೊಟ್ಟು ಸಚಿವರಾಗಿದ್ದಾರೆ. ಭ್ರಷ್ಟಾಚಾರ ನಡೆದಿದೆ. ನೋಡಲಾಗದ ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಈ ಕುರಿತಂತೆ ಹೈಕೋರ್ಟಿನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ ಮಾಡಿದ್ದಾರೆ. ಸರಕಾರ ತನಿಖೆಗೆ ಆದೇಶ ಮಾಡಿದರೆ ಆ ಸಮಿತಿಯ ಮುಂದೆ ಕಾಂಗ್ರೆಸ್ ತಮ್ಮ ಬಳಿ ಇರುವ ಮಾಹಿತಿಯನ್ನು ನೀಡಲಿದೆ ಎಂದು ಸಲೀಂ ಅಹ್ಮದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News