ಅಂತರ್ ರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನಿಂದ 9 ಕೋಟಿ ರೂ. ಮೌಲ್ಯದ ಬಿಟ್ ಕಾಯಿನ್ ಜಪ್ತಿ

Update: 2021-01-15 14:26 GMT

ಬೆಂಗಳೂರು, ಜ.15: ಚೀನಾ ನಿರ್ಮಿತ ಆನ್‍ಲೈನ್ ಗೇಮ್ ಸೇರಿದಂತೆ ಅಂತರ್‍ರಾಷ್ಟ್ರೀಯ ಜಾಲತಾಣಗಳನ್ನು ಹ್ಯಾಕ್ ಮಾಡಿ ಅಕ್ರಮ ಹಣ ಸಂಪಾದನೆ ಆರೋಪದಡಿ ಬಂಧನಕ್ಕೊಳಗಾಗಿರುವ ಶ್ರೀಕೃಷ್ಣನ ವಿಚಾರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು, 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ ಮಾಡಿದ್ದಾರೆ.

ಅಂತರ್‍ರಾಷ್ಟ್ರೀಯ ಮಟ್ಟದ ವೆಬ್‍ಸೈಟ್‍ಗಳು ಸೇರಿದಂತೆ ಬೇರೆಬೇರೆ ದೇಶದ ವಿವಿಧ ಪೋಕರ್ ಗೇಮ್ ವೆಬ್‍ಸೈಟ್ ಮತ್ತು ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್‍ಐ, ಇಥೇರಿಯಂ ಖಾತೆಗಳನ್ನು ಆತ ಹ್ಯಾಕ್ ಮಾಡಿರುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಈತ ನೀಡಿದ ಮಾಹಿತಿ ಆಧರಿಸಿ 9 ಕೋಟಿ ರೂ. ಮೌಲ್ಯದ 31 ಬಿಟ್ ಕಾಯಿನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಆರೋಪಿಯು ಅಂತರ್‍ರಾಷ್ಟ್ರೀಯ ಮಟ್ಟದ ವೆಬ್‍ಸೈಟ್‍ಗಳನ್ನು, ಬೇರೆ ಬೇರೆ ದೇಶದ ವಿವಿಧ ಪೋಕರ್ ಗೇಮ್ ವೆಬ್‍ಸೈಟ್‍ಗಳನ್ನು ಮತ್ತು ಕ್ರಿಪ್ಟೋ ಕರೆನ್ಸಿಗಳಾದ ಬಿಟ್ ಕಾಯಿನ್, ವೈಎಫ್‍ಐ, ಇಥೇರಿಯಂ ಖಾತೆಗಳನ್ನು ಹ್ಯಾಕ್ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಡೇಟಾ ಕಳವು: ಹ್ಯಾಕರ್ ಶ್ರೀಕೃಷ್ಣ ತನ್ನ ಸಹಚರರಾದ ಸುನೀಷ್ ಹೆಗ್ಡೆ, ಪ್ರಸಿದ್ ಶೆಟ್ಟಿ, ಸುಜಯ್, ಹೇಮಂತ್ ಮುದ್ದಪ್ಪ, ರಾಬಿನ್ ಖಂಡೇಲ್‍ವಾಲ್ ಹಾಗೂ ಇತರರೊಂದಿಗೆ ಸೇರಿಕೊಂಡು ಅಕ್ರಮ ಹಣ ಗಳಿಸುವ ಉದ್ದೇಶದಿಂದ ದೇಶದ ಹಾಗೂ ಬೇರೆ ಬೇರೆ ದೇಶಗಳ ಪೋಕರ್ ಗೇಮಿಂಗ್ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ನಂತರ ಡೇಟಾವನ್ನು ಕಳವು ಮಾಡುತ್ತಿದ್ದ. ಬಳಿಕ ಆ ಡೇಟಾವನ್ನು ತಮ್ಮ ಗೇಮಿಂಗ್ ವೆಬ್‍ಸೈಟ್‍ಗೆ ಉಪಯೋಗಿಸಿಕೊಳ್ಳುವ ಪ್ರವೃತ್ತಿ ಹೊಂದಿದ್ದಾನೆ ಎನ್ನುವ ವಿಚಾರವೂ ಗೊತ್ತಾಗಿದೆ.

ಆರೋಪಿ ಪ್ರತಿಷ್ಠಿತ ಹೋಟೆಲ್‍ಗಳಲ್ಲಿ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದು, ಐಶಾರಾಮಿ ಜೀವನಕ್ಕಾಗಿ ಬಿಟ್ ಕಾಯಿನ್ ಖಾತೆಗಳನ್ನು ಹ್ಯಾಕ್ ಮಾಡಿ ಅವುಗಳಿಂದ ಕಳವು ಮಾಡಿ ಬಿಟ್ ಕಾಯಿನ್ ಟ್ರೇಡರ್ ರಾಬಿನ್ ಖಂಡೇಲ್‍ವಾಲ್ ಸೇರಿದಂತೆ ಇತರ ಬಿಟ್ ಕಾಯಿನ್ ಟ್ರೇಡರ್ ಗಳಿಗೆ ನೀಡಿ ಅವರಿಂದ ತನ್ನ ಸಹಚರರ ಬ್ಯಾಂಕ್ ಖಾತೆಗೆ ಹಾಗೂ ಹವಾಲ ಮುಖಾಂತರ ಹಣವನ್ನು ಸಂಗ್ರಹಿಸಿಕೊಂಡು ಐಶಾರಾಮಿ ಜೀವನ ನಡೆಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.

2019ನೆ ಸಾಲಿನಲ್ಲಿ ಆರೋಪಿಯು ಅಕ್ರಮವಾಗಿ ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಕರ್ನಾಟಕ ಸರಕಾರದ ಇ-ಪ್ರಕ್ಯೂರ್‍ಮೆಂಟ್ ಸೈಟ್ ಅನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣವನ್ನು ತನ್ನ ಸಹಚರರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಸರಕಾರದ ಬೊಕ್ಕಸಕ್ಕೆ ನಷ್ಟವನ್ನು ಉಂಟು ಮಾಡಿದ್ದಾನೆ ಎಂದು ಆಯುಕ್ತರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News