ದಲಿತ ಮುಖಂಡ ಭಾಸ್ಕರ್ ಪ್ರಸಾದ್ ಕೊಲೆಗೆ ಯತ್ನ: ಆರೋಪ

Update: 2021-01-15 15:49 GMT

ಬೆಂಗಳೂರು, ಜ.15: ದಲಿತ ಮುಖಂಡ, ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಪ್ರಸಾದ್ ಅವರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳ ತಂಡವೊಂದು ಕೊಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನಲ್ಲಿ ಏನಿದೆ?: ನಾನು (ಭಾಸ್ಕರ್ ಪ್ರಸಾದ್) ನ್ಯೂಸ್ 14 ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಪ್ರತಿದಿನ ಸಮಾಜದ ಆಗುಹೋಗುಗಳ ಎಲ್ಲ ಮಗ್ಗುಲುಗಳನ್ನು ಪರಿಚಯಿಸಿಕೊಡುವ ಕಾರ್ಯಕ್ರಮ ಮಾಡುತ್ತಿದ್ದು, ಪ್ರತಿದಿನ 6 ರಿಂದ 7 ಗಂಟೆಯವರೆಗೆ ಮತ್ತು 8 ರಿಂದ 9 ಗಂಟೆಯವರೆಗೆ ಸುದ್ದಿ ನೇರ ಪ್ರಸಾರ ಇರುತ್ತದೆ. 7 ರಿಂದ 8 ಗಂಟೆಯವರೆಗೆ ಬಿಡುವಿರುತ್ತದೆ. ಈ ಸಮಯದಲ್ಲಿ ನಾನು ಮನೆಗೆ ಹೋಗಿದ್ದೆ. ಆಗ ಟೊಯೊಟಾ ಕಾರ್ ನಲ್ಲಿ ಬಂದ ದುಷ್ಕರ್ಮಿಗಳ ತಂಡ, ನಮ್ಮ ಕಚೇರಿಯ ಬಾಗಿಲು ತೆರೆಯಲು ಪ್ರಯತ್ನಿಸಿದರು. ಅದು ಬಂದ್ ಆಗಿದ್ದ ಹಿನ್ನೆಲೆ ನನ್ನ ಹೆಸರು ಕೂಗಿದ್ದಾರೆ.

ನಂತರ ನಮ್ಮ ಸಿಬ್ಬಂದಿ ಹೊರಬಂದು ನಾನು ಕಚೇರಿಯಲ್ಲಿಲ್ಲವೆಂದು ಹೇಳಿದ್ದಾರೆ. ಇದಕ್ಕೆ ಕೆರಳಿದ ದುಷ್ಕರ್ಮಿಗಳು ಕಚೇರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಇದನ್ನು ನಮ್ಮ ಸಿಬ್ಬಂದಿ ನನಗೆ ಕರೆಯ ಮೂಲಕ ತಿಳಿಸಿದರು.

ನಾನು ಪೊಲೀಸರಿಗೆ ತಿಳಿಸಿ ಕಚೇರಿಗೆ ಹೊರಟೆ. 8:30ರ ಸುಮಾರಿಗೆ ಮತ್ತಷ್ಟು ಜನ ಕಾರು ಮತ್ತು ಬೈಕ್‍ಗಳಲ್ಲಿ ಬಂದು ಬಾಗಿಲು ತೆಗೆಯಲು ಪ್ರಯತ್ನಿಸಿದರು. ಇದನ್ನು ನಾವು ಫೋಟೋ ತೆಗೆದುಕೊಂಡೆವು. ಜೊತೆಗೆ ಇದು ಸಿಸಿಟಿವಿಯಲ್ಲಿಯೂ ಸೆರೆ ಆಗಿದೆ. ಆ ನಂತರ, ಕೆಲವರು ಮೊಬೈಲ್ ಮೂಲಕ ನನ್ನನ್ನು ಸಂಪರ್ಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂಬಂಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಬಿಜೆಪಿ ಕುರಿತು ಪ್ರಶ್ನಿಸಿದಕ್ಕೆ ಈ ಕೃತ್ಯ: ಆರೋಪ

ಹಲವು ದಿನಗಳಿಂದ ನನಗೆ ಕೆಲವು ಬೆದರಿಕೆಯ ಕರೆಗಳು ಬರುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ, ಬಿಜೆಪಿಯ ಬಗ್ಗೆ ಮತ್ತು ಹಿಂದುತ್ವದ ಬಗ್ಗೆ ಮಾತನಾಡಬಾರದೆಂದೂ, ಮಾತನಾಡಿದರೆ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ನಾನು ನಡೆದ ವಿವರಗಳನ್ನು ಹೇಳಿ ದೂರು ನೀಡಿದ್ದೇನೆ. ಆದರೆ ಪೊಲೀಸರು ಇನ್ನೂ ಎಫ್‍ಐಆರ್ ಹಾಕಿಲ್ಲ. ಇದುವರೆಗೂ ನನ್ನ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸುಮಾರು 10 ದೂರುಗಳನ್ನು ನೀಡಿದ್ದೇನೆ. ಆದರೆ ಇದಾವುದಕ್ಕೂ ಪೊಲೀಸರು ಎಫ್‍ಐಆರ್ ದಾಖಲಿಸುವುದಾಗಲಿ, ನಮ್ಮ ಕಚೇರಿ ಮತ್ತು ನನಗೆ ಭದ್ರತೆ ಒದಗಿಸುವ ಕೆಲಸವನ್ನಾಗಲಿ ಮಾಡಿಲ್ಲ.

-ಬಿ.ಆರ್.ಭಾಸ್ಕರ್ ಪ್ರಸಾದ್, ದಲಿತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News