ಜ.26ರಂದು ರೈತರು, ಕಾರ್ಮಿಕರು, ಮಹಿಳೆಯರಿಂದ ಪರ್ಯಾಯ ಪೆರೇಡ್: ಬಡಗಲಪುರ ನಾಗೇಂದ್ರ

Update: 2021-01-15 16:24 GMT

ಬೆಂಗಳೂರು, ಜ.15: ಕೇಂದ್ರ ಸರಕಾರ ಜಾರಿಗೆ ತಂದಿರುವ ಜನವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಜ.26ರಂದು ಗಣರಾಜ್ಯೋತ್ಸವದಂದು ರೈತ-ಕಾರ್ಮಿಕರು, ಯುವಜನರು, ಮಹಿಳೆಯರು ಒಟ್ಟುಗೂಡಿ ಪರ್ಯಾಯ ಪೆರೇಡ್ ನಡೆಸಲಾಗುತ್ತಿದೆ ಎಂದು ವಿವಿಧ ರೈತ-ಕಾರ್ಮಿಕ ಸಂಘಟನೆಗಳ ಸಂಯುಕ್ತ ಹೋರಾಟ ಸಮಿತಿಯ ಸಂಯೋಜಕ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ 50 ದಿನಗಳಿಂದ ಸಂಯುಕ್ತ ಕಿಸಾನ್ ಮೋರ್ಚಾವು ಹೊಸದಿಲ್ಲಿಯಲ್ಲಿ ಹೋರಾಟ ನಡೆಸುತ್ತಿದೆ. ಇದರ ಭಾಗವಾಗಿ ಜ.26ರಂದು ಗಣರಾಜ್ಯೋತ್ಸವದಂದ ಪರ್ಯಾಯ ಪೆರೇಡ್‍ಗೆ ಕರೆ ನೀಡಿದೆ. ಇದನ್ನು ಬೆಂಬಲಿಸಿ ಕರ್ನಾಟಕದಲ್ಲೂ ಪೆರೇಡ್ ನಡೆಸುತ್ತಿದ್ದೇವೆಂದು ತಿಳಿಸಿದ್ದಾರೆ.

ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳಿಂದ ದೇಶದ ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ, ವಿದ್ಯುತ್ ಕ್ಷೇತ್ರಗಳನ್ನು ಸಂಪೂರ್ಣವಾಗಿ ಕಾರ್ಪೊರೇಟ್ ಕಂಪೆನಿಗಳಿಗೆ ಒಪ್ಪಿಸುವ ಕಾರ್ಯಕ್ಕೆ ಮುಂದಾಗಿವೆ. ಆ ಮೂಲಕ ರೈತರು, ಕಾರ್ಮಿಕರನ್ನು ಕಾರ್ಪೊರೇಟ್ ಕಂಪೆನಿಗಳ ಗುಲಾಮರನ್ನಾಗಿಸಲು ಹೊರಟಿವೆ. ಈ ಗುರಿಯನ್ನು ಸಾಧಿಸಲು ಸಂವಿಧಾನ ಗಣತಂತ್ರವನ್ನು ಧಿಕ್ಕರಿಸಿ ಆಳುವ ಪ್ಯಾಶಿಸ್ಟ್ ಶಕ್ತಿಗಳು ಮುನ್ನುಗ್ಗುತ್ತಿವೆ. ಇದಕ್ಕಾಗಿ ಕೋಮುವಾದ ದ್ವೇಷವನ್ನು ಪ್ರಚೋದನೆ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿಯೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ದೇಶದಲ್ಲಿ ರೈತರ ಸ್ವಾಭಿಮಾನದ ಬದುಕಿಗೆ ಮಾಡುವ ಇಲ್ಲವೇ ಮಡಿ ಹೋರಾಟ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜ.26ರಂದು ಮಧ್ಯಾಹ್ನ 12ಕ್ಕೆ ನಗರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಒಂದು ಸಾವಿರ ಟ್ರಾಕ್ಟರ್ ಗಳು, ಮೂರು ಸಾವಿರ ಕಾರು, ದ್ವಿಚಕ್ರ ವಾಹನಗಳು, 15 ಸಾವಿರ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಪರ್ಯಾಯ ಪೆರೇಡ್‍ನಲ್ಲಿ ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರೈತ-ಕಾರ್ಮಿಕ ಸಂಘಟನೆಗಳ ಸಂಯೋಜಕ ಬಯ್ಯಾರೆಡ್ಡಿ, ಸಮಿತಿಯ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸಂಯೋಜಕ ಗುರುಪ್ರಸಾದ್ ಕೆರೆಗೋಡು, ಕೆ.ವಿ.ಭಟ್, ದೇವಿ, ವಾಸುದೇವರೆಡ್ಡಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News