ಗೋಹತ್ಯೆ ನಿಷೇದಕ್ಕಿಂತ ಮಾನವ ಹತ್ಯೆ ನಿಲ್ಲಬೇಕು: ಸಂಸದ ವಿ.ಶ್ರೀನಿವಾಸಪ್ರಸಾದ್

Update: 2021-01-15 16:26 GMT

ಮೈಸೂರು,ಜ.15: ಗೋಹತ್ಯೆ ನಿಷೇಧಕ್ಕಿಂತ ಮಾನವ ಹತ್ಯೆ ನಿಲ್ಲಿಸಬೇಕು ಎಂದು ಚಾಮರಾಜನಗರ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಗೋಹತ್ಯೆಗಿಂತಲೂ ಹೆಚ್ಚಾಗಿ ಮಾನವ ಹತ್ಯೆಗಳು ನಡೆಯುತ್ತಿವೆ. ಅವುಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ವಿರೋಧ ಪಕ್ಷನಾಯಕ ಸಿದ್ದರಾಮಯ್ಯ ಗೋಹತ್ಯೆ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ  ಮುಂಬರುವ ಚುನಾವಣೆಯಲ್ಲಿ ಇದನ್ನೇ ಮುನ್ನಲೆಗೆ ತಂದು ಮತಯಾಚಿಸಲಿ, ಜನಾಭಿಪ್ರಾಯಕ್ಕೆ ಬಿಡೋಣ. ತಪ್ಪೋ ಸರಿಯೋ ಜನ ತೀರ್ಮಾನ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಇದು ದೊಡ್ಡದೇನಲ್ಲ. ಜನ ಇವರನ್ನು ಅಧಿಕಾರಕ್ಕೆ ತಂದರೆ ಗೋ ಹತ್ಯೆ ನಿಷೇಧ ಕಾನೂನನ್ನು ಹಿಂಪಡೆಯಬಹುದು. ಅದಕ್ಕಿಂತಲೂ ಮುಖ್ಯವಾಗಿ ಮಾನವ ಹತ್ಯೆ ತಡೆಯುವಲ್ಲಿ ನಾವೆಲ್ಲರೂ ಕ್ರಮ ಕೈಗೊಳ್ಳಬೇಕು. ಈಗಾಗೇ ನಾನು ಶಾಸಕನಾಗಿದ್ದ ವೇಳೆ ಹಲವಾರು ಬಾರಿ ವಿಧಾನಸಭೆಯಲ್ಲಿ ಮಾನವ ಹತ್ಯೆ ಕುರಿತು ಮಾತನಾಡಿದ್ದೇನೆ ಎಂದು ಹೇಳಿದರು.

ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿರುವ ಕುರಿತು ಅಸಮಧಾನ ವ್ಯಕ್ತಪಡಿಸುತ್ತಿರುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆ ಕುರಿತು ಮಾತನಾಡಿದ ಅವರು, ಸರ್ಕಾರ ಬರಲು ವಿಶ್ವನಾಥ್ ರೀತಿ ಯೋಗೇಶ್ವರ್ ಸಹ ಕಾರಣ. ಇವರಿಗೆ ಅಸಮಾಧಾನ ಇರೋದು ಸತ್ಯ. ಅಸಮಾಧಾನದ ಬಗ್ಗೆ ಇವರು ಕೇಳಿದ್ದು ಸರಿ. ಅವರು ಸಚಿವ ಸ್ಥಾನ ಕೊಟ್ಟಿರೋದು ಸರಿ ಇದೆ. ಇದನ್ನು ಮುಖ್ಯಮಂತ್ರಿಗಳಿಗೆ ಯಾಕೇ ಕೊಟ್ಟಿರಿ ಅಂತ ಕೇಳಬಾರದು. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ನುಡಿದರು.

ಹಾಗೆಯೇ ಹೆಚ್.ವಿಶ್ವನಾಥ್ ಅಸಮಾಧಾನ ಸಂಬಂಧ, ವಿಶ್ವನಾಥ್ ಜೊತೆ ಮಾತನಾಡುತ್ತೇನೆ. ಸದ್ಯ ಕೋಪದಲ್ಲಿದ್ದಾರೆ. ಈಗ ಅವರಿಗೆ ಸಲಹೆ ಕೊಡಲು ಸಾಧ್ಯವಿಲ್ಲ. ಸದ್ಯ ಏನು ಮಾಡಲು ಸಾಧ್ಯವಿಲ್ಲ. ಅವರು ಮಾತಾಡಿ ಮುಗಿಸಿದ ನಂತರ ಮಾತನಾಡುತ್ತೇನೆ ಎಂದರು. 

ಸಚಿವ ಸಂಪುಟ ವಿಸ್ತರಣೆಯಾದಾಗ ಅಸಮಾಧಾನಗಳು ಸಹಜ. ಸಂಪುಟ ವಿಸ್ತರಣೆಯಾದಾಗ ಎಲ್ಲರಿಗೂ ಅವಕಾಶ ಕೊಡಲು ಸಾಧ್ಯವಿಲ್ಲ. ಈ ವೇಳೆ ಅಸಮಾಧಾನ ಉಂಟಾಗುತ್ತೆ. ವಿಶ್ವನಾಥ್ ಅವರು ಎಡವಿದ್ದಾರೆ. ಅವರು ಪಕ್ಷಕ್ಕೆ ಸೇರಬೇಕಾದರೆ ಬೇರೆ ಮಾತುಕತೆಯಾಗಿತ್ತು. ಸಿಎಂ ಮತ್ತು ಅವರಿಬ್ಬರೇ ಮಾತನಾಡಿದ್ದರು. ಸ್ಥಾನ ಕೈ ತಪ್ಪಲು ಅನೇಕ ಕಾರಣಗಳಿದೆ. ಅದನ್ನೆಲ್ಲ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಮುಂದೆ ಮುನಿರತ್ನರಿಗೆ ಸಚಿವ ಸ್ಥಾನ ಕೊಡಬೇಕಾಗಿತ್ತು. ನಾಗೇಶ್ ವಿರುದ್ಧ ಆರೋಪ ಬಂದಿತ್ತು. ಮುಂದೆ ಮುನಿರತ್ನಗೆ ಅವಕಾಶ ಸಿಗುತ್ತದೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.

ನಿಗಮ ಮಂಡಳಿ ವಿಚಾರದಲ್ಲಿ ಸಿಎಂ ಬಗ್ಗೆ ಈಗಲೂ ನನಗೆ ಬೇಸರವಿದೆ. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ತಪ್ಪು ಮಾಡಿದ್ದಾರೆ. ನಾನು ಹೇಳಿದ ಒಬ್ಬರಿಗೂ ನಿಗಮ ಮಂಡಳಿ ಸ್ಥಾನ ನೀಡಿಲ್ಲ. ಚುನಾವಣೆಯಲ್ಲಿ ಕೆಲಸ ಮಾಡಿದ ಮುಖಂಡರಿಗೆ ಕಾರ್ಯಕರ್ತರಿಗೆ ಇದು ಬೇಸರ ತಂದಿದೆ ಎಂದು ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಕುಟುಂಬ ರಾಜಕಾರಣ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹಳ ಎಚ್ಚರಿಕೆಯಿಂದ ಇರಬೇಕು, ಆಡಳಿತದಲ್ಲಿ ಅವರ ಪುತ್ರ ವಿಜಯೇಂದ್ರ ಕೈ ಹಾಕುತ್ತಿರುವುದು ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆಲ್ಲಾ ಅವಕಾಶ ನೀಡಬಾರದು. ಕುಟುಂಬ ರಾಜಕಾರಣಕ್ಕೆ ಅವಕಾಶಕೊಟ್ಟರೆ ಎಲ್ಲರೂ ಹೇಗೆ ತಿರುಗಿ ಬೀಳುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

- ವಿ.ಶ್ರೀನಿವಾಸಪ್ರಸಾದ್, ಸಂಸದ, ಚಾಮರಾಜನಗರ ಕ್ಷೇತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News