750 ಎಕರೆ ಭೂಮಿ ಬಿಟ್ಟುಕೊಡುವಂತೆ ರಾಜನಾಥ್ ಸಿಂಗ್‍ಗೆ ಮನವಿ ಸಲ್ಲಿಸಿದ ಡಿಸಿಎಂ

Update: 2021-01-15 16:33 GMT

ಬೆಂಗಳೂರು, ಜ.15: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪಿಸುವ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ವಶದಲ್ಲಿರುವ ರಾಜ್ಯದ 10,639 ಎಕರೆ ಭೂಮಿಯ ಪೈಕಿ 750 ಎಕರೆ ಭೂಮಿಯನ್ನು ರಾಜ್ಯ ಸರಕಾರಕ್ಕೆ ಬಿಟ್ಟುಕೊಡುವಂತೆ ಐಟಿ-ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಶುಕ್ರವಾರ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ರಕ್ಷಣಾ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದ ಡಿಸಿಎಂ, ರಾಜನಾಥ್ ಸಿಂಗ್ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು.

ಈ ಹಿಂದೆಯೇ ಹತ್ತು ಸಾವಿರ ಎಕರೆಯಷ್ಟು ಭೂಮಿಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಪ್ರತೀ ಹತ್ತು ವರ್ಷಕ್ಕೊಮ್ಮೆ ಗುತ್ತಿಗೆ ನವೀಕರಣ ಮಾಡಲಾಗುತ್ತಿದೆ. ಇಷ್ಟು ಪ್ರಮಾಣದ ಭೂಮಿಯನ್ನು ರಕ್ಷಣಾ ಇಲಾಖೆ ಬಳಸುತ್ತಿಲ್ಲ. ಹೀಗಾಗಿ ಈ ಜಾಗದ 750 ಎಕರೆ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿದೆ. ಈ ಪಾರ್ಕ್ ಬಂದರೆ ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಪ್ರದೇಶದಲ್ಲಿ 60 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಜತೆಗೆ ಧಾರವಾಡದ ಐಐಟಿ ಹಾಗೂ ಕೆಎಲ್‍ಇ ಶೈಕ್ಷಣಿಕ ಸಂಸ್ಥೆಗಳಿಂದ ಹೊರಬರುವ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶವಿದೆ ಎಂಬ ವಿಷಯವನ್ನು ರಾಜನಾಥ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ಈ ಭೂಮಿ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲೇ ಇದ್ದು, ಐಟಿ ಪಾರ್ಕ್ ಸ್ಥಾಪನೆಗೆ ಅತ್ಯುತ್ತಮ ಜಾಗವಾಗಿದೆ. ಸ್ಥಳೀಯ ಆಡಳಿತ, ಮಾಹಿತಿ ತಂತ್ರಜ್ಞಾನ ಇಲಾಖೆ ಅಧಿಕಾರಿಗಳು, ಐಟಿ-ಬಿಟಿ ವಿಷನ್ ಗ್ರೂಪ್ ಸೇರಿದಂತೆ ಎಲ್ಲರೂ ಈ ಜಾಗವೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಸಂಗತಿಗಳನ್ನು ರಾಜನಾಥ್ ಸಿಂಗ್ ಅವರಿಗೆ ತಿಳಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ ಕರ್ನಾಟಕವು ಶೇ.30ರಷ್ಟು ಪಾಲು ಕೊಡುವ ಗುರಿಯನ್ನು ಹಾಕಿಕೊಂಡಿದೆ. ಆ ನಿಟ್ಟಿನಲ್ಲಿ 2020-21ನೆ ಸಾಲಿನ ನೂತನ ಐಟಿ ನೀತಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಆ ನೀತಿಯ ಭಾಗವಾಗಿ ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆ ಮಾಡುವ ಪ್ರಸ್ತಾವನೆ ಇದೆ ಎಂದು ರಕ್ಷಣಾ ಸಚಿವರಿಗೆ ವಿವರಿಸಲಾಯಿತು ಎಂದು ಡಿಸಿಎಂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News