ಜ.17ರಂದು ಮಂಡ್ಯ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ

Update: 2021-01-15 16:50 GMT

ಮಂಡ್ಯ, ಜ.15: ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜ.17ರಂದು  ನಗರದ ಕರ್ನಾಟಕ ಸಂಘದ ಬಯಲು ರಂಗಮಂದಿರ ಆವರಣದಲ್ಲಿ ಮಂಡ್ಯ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿ ಎಂ.ವಿ.ಧರಣೇಂದ್ರಯ್ಯನವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ರಾಷ್ಟ್ರಧ್ವಜ, ಅಪರ ಜಿಲ್ಲಾಧಿಕಾರಿ ಎಸ್.ಶೈಲಜ ನಾಡಧ್ವಜ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ್ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ ಎಂದರು.

ಬೆಳಗ್ಗೆ 10.30ಕ್ಕೆ ನಾಡೋಜ ಹಂಪ ನಾಗರಾಜಯ್ಯ ಸಮ್ಮೇಳನ ಉದ್ಘಾಟಿಸಲಿದ್ದು, ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಂ.ಬಿ.ಸುರೇಶ್, ನಗರಸಭಾಧ್ಯಕ್ಷ ಎಚ್.ಎಸ್.ಮಂಜು ಸಾಹಿತಿ ಡಾ.ಪ್ರದೀಪಕುಮಾರ್ ಹೆಬ್ರಿ, ಇತರ ಗಣ್ಯರು ಉಪಸ್ಥಿತರಿರುವರು ಎಂದು ಅವರು ಹೇಳಿದರು.

ಮಧ್ಯಾಹ್ನ 12.30ಕ್ಕೆ ಸಂಕೀರ್ಣ ಗೋಷ್ಠಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಬಸರಾಳು ಸ.ಪ.ಪೂ.ಕಾಲೇಜಿನ ಉಪನ್ಯಾಸಕ ಬೆಕ್ಕಳಲೆ ಲೋಕೇಶ್ ‘ನವೋದಯ ಸಾಹಿತ್ಯಕ್ಕೆ ಮಂಡ್ಯ ತಾಲೂಕಿನ ಸಾಹಿತಿಗಳ ಕೊಡುಗೆ’ ವಿಷಯವಾಗಿ, ಸಿ.ಐ.ಟಿ.ಯು ಪ್ರಧಾನ ಕಾರ್ಯದರ್ಶಿ ಸಿ.ಕಮಾರಿ ‘ಮೈಷುಗರ್ ಅಳಿವು ಉಳಿವು’ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

2.30ಕ್ಕೆ ನಡೆಯುವ ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಡಾ.ಎಸ್.ಶ್ರೀನಿವಾಸಶೆಟ್ಟಿ ವಹಿಸಲಿದ್ದು, ಯುವ ಕವಿಯಿತ್ರಿ ಎಚ್.ಆರ್.ಕನ್ನಿಕಾ ಉದ್ಘಾಟಿಸಲಿದ್ದಾರೆ. ಡಾ.ಕಲಾಧರ್, ಗೀತಾಮಣಿ, ಎಸ್.ಸಿ.ಮಂಗಳ, ಗಿರೀಶ್ ಗಾಣದಾಳು, ಕೊ.ನಾ ಪುರುಷೋತ್ತಮ್, ಸಬ್ಬನಹಳ್ಳಿ ಶಶಿಧರ, ತೈರೊಳ್ಳಿ ಮಂಜುನಾಥ ಉಡುಪ, ಎಸ್.ಶೀಧರಮೂರ್ತಿ, ಗೀತಾ ಅನಂತನಾಗ್, ರಾಣಿಚಂದ್ರಶೇಖರ್, ಕೆ.ವಿ.ರಮೇಶ್, ಕಟ್ಟೆ ಕೃಷ್ಣಸ್ವಾಮಿ, ಬಾಲಕೃಷ್ಣ ಆನಸೋಸಲು ಹಾಗೂ ಪುನೀತ್ ಭಾಸ್ಕರ್ ಕವನ ವಾಚಿಸಲಿದ್ದಾರೆ.

ಸಂಜೆ 4ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ತೈಲೂರು ವೆಂಕಟಕೃಷ್ಣ ಸಮಾರೋಪ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಸುಂಡಹಳ್ಳಿ, ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ ಹಾಗೂ ಸಂಘಸಂಸ್ಥೆ ಪ್ರತಿನಿಧಿ ಹೊಳಲು ಶ್ರೀಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News