ಬಿಎಸ್‌ವೈ ಸಿಎಂ ಆಗಬೇಕೆಂದು ಹೊತ್ತಿದ್ದ ಹರಕೆ ತೀರಿಸಲು ಸರಕಾರದ ಹಣಕ್ಕೆ ಮೊರೆ ಹೋದ ಬಿಜೆಪಿ ಶಾಸಕ !

Update: 2021-01-15 17:06 GMT

ಚಿಕ್ಕಮಗಳೂರು, ಜ.15: ತಮ್ಮ ಬೇಡಿಕೆ ಈಡೇರಿಸುವಂತೆ ದೇವರಿಗೆ ಹರಕೆ ಹೊರುವ ಸಾರ್ವಜನಿಕರು, ಭಕ್ತರು ತಮ್ಮ ಬೇಡಿಕೆ ಈಡೇರಿದಾಗ ತಮ್ಮ ಸ್ವಂತ ಹಣದಲ್ಲಿ ಹರಕೆ ಈಡೇರಿಸುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಬ್ಬರು ಜನಪ್ರತಿನಿಧಿ ತಾವು ಹೊತ್ತ ಹರಕೆ ತೀರಿಸಲು ಸರಕಾರದ ಹಣಕ್ಕೆ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಯಡಿಯೂರಪ್ಪ ರಾಜ್ಯದ ಸಿಎಂ ಆಗಬೇಕೆಂದು ತಾಲೂಕಿನ ಫಲ್ಗುಣಿ ಕಾಲನಾಥೇಶ್ವರ ದೇವರಿಗೆ ಹರಕೆ ಹೊತ್ತಿದ್ದು, ಯಡಿಯೂರಪ್ಪ ಸಿಎಂ ಆದಲ್ಲಿ ದೇವಾಲಯಕ್ಕೆ ಮರದ ರಥ ಮಾಡಿಸಿ ಕೊಡುವುದಾಗಿಯೂ ಹಾಗೂ ತಮ್ಮ ಕ್ಷೇತ್ರದಲ್ಲೇ ಇರುವ ಬೆಟಗೆರೆ ಕಾಲಭೈರೇಶ್ವರ ದೇವಾಲಯದ ಜೀರ್ಣೋದ್ಧಾರ ಮಾಡುವುದಾಗಿಯೂ ಹರಕೆ ಹೊತ್ತಿದ್ದರು ಎನ್ನಲಾಗಿದೆ.

ಕುಮಾರಸ್ವಾಮಿ ಹರಕೆ ಹೊತ್ತಂತೆ ಬಿ.ಎಸ್.ಯಡಿಯೂರಪ್ಪ ಸದ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಆದರೆ ಹರಕೆ ತೀರಿಸಲು ಶಾಸಕ ಕುಮಾರಸ್ವಾಮಿ ತಮ್ಮ ಸ್ವಂತ ಹಣ ಖರ್ಚು ಮಾಡದೇ ಸರಕಾರದ ಹಣದ ಮೊರೆ ಹೋಗಿದ್ದಾರೆ. ತಾನು ಹೊತ್ತ ಹರಕೆ ತೀರಿಸಲು ಹಣ ಬಿಡುಗಡೆ ಮಾಡುವಂತೆ ಕುಮಾರಸ್ವಾಮಿ ಸಿಎಂ ಯಡಿಯೂರಪ್ಪರಿಗೆ ಪತ್ರ ಬರೆದಿದ್ದು, ಈ ಪತ್ರಕ್ಕೆ ಮನ್ನಣೆ ನೀಡಿರುವ ಸಿಎಂ ಯಡಿಯೂರಪ್ಪ ಅವರು ಫಲ್ಗುಣಿ ಕಾಲನಾಥೇಶ್ವರ ದೇವಾಲಯಕ್ಕೆ ಮರದ ರಥ ನಿರ್ಮಾಣ ಮಾಡಲು 25 ಲಕ್ಷ ರೂ. ಹಾಗೂ ಬೆಟಗೆರೆ ಕಾಲಭೈರವೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ 5 ಲಕ್ಷ ಸೇರಿ ಒಟ್ಟು 30 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ.

ಶಾಸಕ ಕುಮಾರಸ್ವಾಮಿ ತಾನು ಹೊತ್ತಿದ್ದ ಹರಕೆ ವಿಚಾರ ಹಾಗೂ ಸಿಎಂ ಹಣ ಬಿಡುಗಡೆ ಮಾಡಿರುವ ವಿಚಾರವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ಮುಖ್ಯಮಂತ್ರಿಗೆ ಅವರು ಬರೆದ ಪತ್ರ ಹಾಗೂ ಅದೇ ಪತ್ರದ ಮೇಲೆ ಸಿಎಂ ಹಣ ಬಿಡುಗಡೆಗೆ ಆದೇಶ ಮಾಡಿ ಸಹಿ ಮಾಡಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಶಾಸಕ ಕುಮಾರಸ್ವಾಮಿ ಅವರು ತಮ್ಮ ಹರಕೆಯನ್ನು ಸರಕಾರದ ಹಣದಲ್ಲಿ ತೀರಿಸಲು ಮುಂದಾಗಿರುವುದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಾಸಕ ತಮ್ಮ ಹರಕೆಯನ್ನು ಸ್ವಂತ ಹಣದಲ್ಲಿ ತೀರಿಸಬೇಕೇ ಹೊರತು ಸರಕಾರದ ಹಣದಲ್ಲಿ ಅಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಸಂಕ್ರಾಂತಿ ಹಬ್ಬದ ಸಿಹಿ ಸುದ್ದಿ ನಮ್ಮ ಮೆಚ್ಚಿನ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿ ಆದರೆ ಫಲ್ಗುಣಿಯ ಶ್ರೀಕಲಾನಾಥೇಶ್ವರ ದೇವಸ್ಥಾನಕ್ಕೆ...

Posted by MP Kumara Swamy on Wednesday, 13 January 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News