ಬಿಎಸ್‍ವೈ ವಿರುದ್ಧದ ಸಿಡಿ ಪ್ರಕರಣ ಸುಳ್ಳು: ಡಿಸಿಎಂ ಲಕ್ಷ್ಮಣ ಸವದಿ

Update: 2021-01-16 13:02 GMT

ಬೆಳಗಾವಿ, ಜ.15: ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಕೇಳಿ ಬಂದಿರುವ ಸಿಡಿ ಪ್ರಕರಣ ಸುಳ್ಳಾಗಿದ್ದು, ಯಾವ ಸಿಡಿನೂ ಇಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ  ಸವದಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ವಿಫಲರಾದವರು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರಷ್ಟೆ. ಇವೆಲ್ಲವೂ ಕೆಲವೇ ದಿನಗಳಲ್ಲಿ ಸರಿಹೋಗಲಿದೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಾಗುವಾಗ ಎಲ್ಲ ಸರಕಾರ, ಪಕ್ಷದಲ್ಲೂ ಭಿನ್ನಮತ ಅಥವಾ ಅಸಮಾಧಾನ ಸಹಜ. ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲವೋ ಅವರಿಗೆ ಬೇಸರ ಆಗಿರುತ್ತದೆ. ಹೀಗಾಗಿ ಅಸಮಾಧಾನ ಹೊರಹಾಕುತ್ತಾರೆ. ಇದು ಬಿಜೆಪಿ ಕುಟುಂಬದ ಮಧ್ಯದಲ್ಲಿರುವ ಅಸಮಾಧಾನವಾಗಿದೆ. ಅದೆಲ್ಲವೂ ಮುಂದಿನ ದಿನಗಳಲ್ಲಿ ಸರಿಹೋಗಲಿದೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿಯಲ್ಲಿ ಮೊದಲಿನಿಂದಲೂ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶವಿದೆ. ಸದ್ಯ ಅಸಮಾಧಾನಗೊಂಡಿರುವ ಶಾಸಕರು ನನ್ನ ಸಂಪರ್ಕಕ್ಕೆ ಬಂದಿಲ್ಲ. ಶೀಘ್ರದಲ್ಲೇ ಅವರೊಂದಿಗೆ ಮಾತನಾಡುತ್ತೇನೆಂದು ಅವರು ಹೇಳಿದ್ದಾರೆ.

ಅಮಿತ್ ಶಾ ರಾಜ್ಯ ಪ್ರವಾಸ

ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಜ.16ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಭದ್ರಾವತಿಗೆ ಹೋಗಿ ಪುನಃ ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡುವರು. ಜ.17ರಂದು ಬೆಳಗ್ಗೆ 10.30ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್‍ನಲ್ಲಿ ಬಾಗಲಕೋಟೆಗೆ ತೆರಳುವರು. ಮಧ್ಯಾಹ್ನ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಕ್ಷ ಆಯೋಜಿಸಿರುವ ಜನಸೇವಕ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಬಳಿಕ ಬಿಜೆಪಿ ಸಮನ್ವಯ ಸಮಿತಿ ಸಭೆ ನಡೆಸುವರು. ದಿವಂಗತ ಸುರೇಶ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳುವರು. ಸಂಜೆ ಅಧಿಕಾರಿಗಳ ಸಭೆ ನಡೆಸಿ ಹೊಸ ದಿಲ್ಲಿಗೆ ಮರಳುವರು.

-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News