ಹಿರಿಯ ಪತ್ರಕರ್ತ ಹನುಮಂತ ಹೂಗಾರ ಇನ್ನಿಲ್ಲ

Update: 2021-01-15 17:19 GMT

ಹುಬ್ಬಳ್ಳಿ, ಜ.15: ಹಿರಿಯ ಪತ್ರಕರ್ತ ಹನುಮಂತ ಭೀಮಪ್ಪ ಹೂಗಾರ(74) ಅವರು ಶುಕ್ರವಾರ ಮಧ್ಯಾಹ್ನ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಕಲಬುರಗಿ ಮಠ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಇತ್ತೀಚೆಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ 2020ನೆ ಸಾಲಿನ 'ಜೀವಮಾನ ಸಾಧನೆ' ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಹನುಮಂತ ಹೂಗಾರ ಅವರು ಭಾಜನರಾಗಿದ್ದರು.

ಹೂಗಾರ ಅವರು ಸುಮಾರು 4 ದಶಕಗಳಿಗೂ ಹೆಚ್ಚು ಕಾಲ ನೇತಾಜಿ, ವಿಶಾಲ ಕರ್ನಾಟಕ, ಪ್ರವರ್ತಕ ಮುಂತಾದೆಡೆ ಸೇವೆ ಸಲ್ಲಿಸಿರುವ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವ ಇವರು ಮಹಾನಗರ ಪಾಲಿಕೆ ಸದಸ್ಯರಾಗಿಯೂ ಒಂದು ಅವಧಿ ಕಾರ್ಯ ನಿರ್ವಹಿಸಿದ್ದಾರೆ. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪದಾಧಿಕಾರಿಗಳು ಹೂಗಾರ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News