ಯತ್ನಾಳ್ ಮರಳಿ ಬಿಜೆಪಿಗೆ ಬೇಡ ಎಂದರೂ ಬಿಎಸ್‍ವೈ ಕೇಳಲಿಲ್ಲ: ಸಂಸದ ರಮೇಶ್ ಜಿಗಜಿಣಗಿ

Update: 2021-01-15 17:21 GMT

ವಿಜಯಪುರ, ಜ.15: ಬಿಜೆಪಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಮರು ಸೇರ್ಪಡೆ ಬೇಡವೆಂದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಳಲಿಲ್ಲ. ಈಗ ಇದೇ ಅವರಿಗೆ ಮುಳುವಾಗಿದೆ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ ನಡೆಸಿದರು.

ಶುಕ್ರವಾರ ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿದ್ದಾರೆ ಎಂಬ ಒಂದೇ ಕಾರಣಕ್ಕೆ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡಿಸಿಕೊಳ್ಳಬೇಡಿ ಎಂದರೂ ಬಿಎಸ್‍ವೈ ಕೇಳಲಿಲ್ಲ ಎಂದು ಹೇಳಿದರು.

ಏನೇ ಅಸಮಾಧಾನ ಇದ್ದರೂ ಪಕ್ಷದ ವರಿಷ್ಠರ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕೇ ವಿನಃ ಹಾದಿಬೀದಿಯಲ್ಲಿ ಹೇಳಿಕೆಗಳನ್ನು ನೀಡುತ್ತಾ ತಿರುಗಾಡಬಾರದು. ಇದರಿಂದ, ಯಾವುದೇ ಸಮಸ್ಯೆಗಳೂ ಬಗೆಹರಿಯುವುದಿಲ್ಲ. ಬದಲಾಗಿ ಉಲ್ಭಣಗೊಳ್ಳುತ್ತವೆ. ಇದೇ ರೀತಿಯಾಗಿ ಪದೇ ಪದೇ ವರ್ತಿಸುತ್ತಿದ್ದರೆ, ಜನರು ಯತ್ನಾಳಗೆ ತಲೆ ಕೆಟ್ಟಿದೆ ಎನ್ನುತ್ತಾರೆ ಎಂದು ಹೇಳಿದರು.

ಸದ್ಯ 7 ಜನರು ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಸವರಾಜ ಯತ್ನಾಳ ಅವರೂ ಮಂತ್ರಿಗಳಾಗಬಹುದು. ಶೇ.30ರಷ್ಟು ಜನಸಂಖ್ಯೆ ಹೊಂದಿರುವ ದಲಿತ ಸಮುದಾಯದವರು ಈವರೆಗೆ ಒಬ್ಬರೂ ಮುಖ್ಯಮಂತ್ರಿ ಆಗಿಲ್ಲ, ನಮ್ಮ ಸಮುದಾಯಕ್ಕೂ ಇಂಥ ಅವಕಾಶ ಸಿಗಬೇಕು ಎಂದು ಹೇಳಿದರು.

ಶಾಸಕ ಯತ್ನಾಳ ಅವರು ಸಿಡಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರ ಬಳಿ ಸಿಡಿ ಇದ್ದರೂ ಇರಬಹುದು. ನೀವು ಅವರನ್ನೇ ಕೇಳಿ ಎಂದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News