ನಮ್ಮ ಖಾಸಗಿ ಮಾಹಿತಿಗಳು ಮಾರಾಟಕ್ಕಿವೆ!

Update: 2021-01-16 07:05 GMT

ನಮ್ಮ ಬದುಕು, ನಮ್ಮ ಖಾಸಗಿ ಮಾಹಿತಿಗಳೇ ಆಧುನಿಕ ಜಗತ್ತಿನ ತೈಲ ನಿಕ್ಷೇಪಗಳಾಗಿ ಪರಿವರ್ತನೆಗೊಂಡಿರುವ ಅಪಾಯಕಾರಿ ಬೆಳವಣಿಗೆಗಳ ಕುರಿತಂತೆ ಜನರು ಇನ್ನೂ ಎಚ್ಚರಗೊಂಡಿಲ್ಲ. ಒಂದು ಸಾರ್ವಭೌಮ ದೇಶವೊಂದರ ತೈಲ ನಿಕ್ಷೇಪಗಳನ್ನು ಇನ್ನೊಂದು ರಾಷ್ಟ್ರವು ವಶಪಡಿಸಿಕೊಳ್ಳಲು ಮುಂದಾದಲ್ಲಿ ಮಹಾಯುದ್ಧ ಸಂಭವಿಸುವುದಂತೂ ಖಂಡಿತ. ಆದರೆ ದತ್ತಾಂಶ (ಡೇಟಾ)ಗಳ ವಿಷಯದಲ್ಲಿ, ಬಹುತೇಕ ಜನರು ಡಿಜಿಟಲ್ ಸೇವೆಗಳನ್ನು ಪಡೆದುಕೊಳ್ಳುವುದಕ್ಕಾಗಿ ತಮ್ಮ ಖಾಸಗಿತನವನ್ನು ಯಾವ ಆತಂಕವೂ ಇಲ್ಲದೆ ಬಯಲುಗೊಳಿಸುತ್ತಾ ಇದ್ದಾರೆ. ಇದರ ಜೊತೆಗೆ ವ್ಯಕ್ತಿಯ ಖಾಸಗಿತನ ಹಾಗೂ ದತ್ತಾಂಶದ ಭದ್ರತೆ ಕುರಿತಾಗಿ ಈ ಸೇವೆಗಳು ನಿಗದಿಪಡಿಸಿರುವ ನಿಬಂಧನೆಗಳು ಕೂಡಾ ಸಾಮಾನ್ಯವಾಗಿ ಪಾರದರ್ಶಕವಾಗಿಲ್ಲ ಹಾಗೂ ಹೆಚ್ಚಿನ ವ್ಯಕ್ತಿಗಳು ನಿಬಂಧನೆಗಳನ್ನು ಓದಿಕೊಳ್ಳದೆಯೇ ಅವುಗಳಿಗೆ ತಮ್ಮ ಒಪ್ಪಿಗೆಯನ್ನು ನೀಡುತ್ತಾರೆ. ಎರಡನೆಯದಾಗಿ ತೈಲವು ಸೀಮಿತವಾದ ನೈಸರ್ಗಿಕ ಸಂಪನ್ಮೂಲವಾಗಿದ್ದರೆ, ತಾಂತ್ರಿಕ ದತ್ತಾಂಶಗಳು ಅನಂತವಾದುದಾಗಿವೆ. ಮೂರನೆಯದಾಗಿ ತೈಲವನ್ನು ಒಂದು ಬಾರಿ ಮಾತ್ರ ಬಳಸಬಹುದಾದರೆ, ದತ್ತಾಂಶವನ್ನು ಏಕಕಾಲಕ್ಕೆ ವಿವಿಧೆಡೆ ಬಳಸಿಕೊಳ್ಳಬಹುದಾಗಿದೆ.

ನಮ್ಮ ಖಾಸಗಿತನವನ್ನು ಮಾರುಕಟ್ಟೆ ಶಕ್ತಿಗಳಿಗೆ ಒಪ್ಪಿಸುವ ಈ ವ್ಯವಸ್ಥೆಯು ತೀರಾ ಆತಂಕಕಾರಿಯಾಗಿದೆ. ವಿಶ್ವಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತೀರಾ ಇತ್ತೀಚೆಗೆ ತನ್ನದೇ ಒಡೆತನದ, ಜನಪ್ರಿಯ ಸಂದೇಶವಾಹಕ (ಮೆಸೆಜಿಂಗ್) ಸೇವೆಯಾದ ವಾಟ್ಸ್‌ಆ್ಯಪ್‌ನ ದತ್ತಾಂಶಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುವುದಾಗಿ ಹೇಳಿದೆ. ಫೇಸ್‌ಬುಕ್ ಹಾಗೂ ಅದರ ಸಹ ಸೇವಾಜಾಲತಾಣಗಳಾದ ವಾಟ್ಸ್‌ಆ್ಯಪ, ಇನ್‌ಸ್ಟಾಗ್ರಾಂ ಅಥವಾ ಮೆಸೆಂಜರ್‌ಗಳಿಗೆ ಪ್ರತಿ ದಿನ 173 ಕೋಟಿ ಬಳಕೆದಾರರು ಭೇಟಿ ನೀಡುತ್ತಿದ್ದು, ಇದು ಭಾರತದ ಒಟ್ಟು ಜನಸಂಖ್ಯೆಗಿಂತಲೂ ಅಧಿಕವಾಗಿದೆ.

2012ರಲ್ಲಿ ಫೇಸ್‌ಬುಕ್, ಸಾಮಾಜಿಕ ಜಾಲತಾಣ ಸೇವೆಯನ್ನು ಆರಂಭಿಸುವಾಗ ಅದು ಗ್ರಾಹಕರಿಗೆ ಉತ್ತಮ ರೀತಿಯ ಸೇವೆಗಳನ್ನು ನೀಡುವುದಾಗಿ ಹೇಳಿಕೊಂಡು ನೂರಾರರು ಪೇಟೆಂಟ್‌ಗಳಿಗಾಗಿ ಅರ್ಜಿಯನ್ನು ಸಲ್ಲಿಸಿತ್ತು.2018ರ ಜೂನ್ 21ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಸಾಹಿಲ್ ಚಿನೊಯ್ ಎಂಬವರು ಫೇಸ್‌ಬುಕ್ ಸಲ್ಲಿಸಿದ್ದ ಪೇಟೆಂಟ್ ಅರ್ಜಿಗಳ ಹಿಂದಿರುವ ದುರುದ್ದೇಶವನ್ನು ಬಯಲುಗೊಳಿಸಿದರು. ನ್ಯೂಯಾರ್ಕ್ ಮೂಲದ ಉದ್ಯಮ ಪತ್ರಿಕೆ ಇಂಕ್.ಮ್ಯಾಗಝಿನ್, ತಾನು ಪ್ರಕಟಿಸಿದ ಲೇಖನವೊಂದರಲ್ಲಿ ಪೇಸ್‌ಬುಕ್‌ನ ನಾಲ್ಕು ವಿವಾದಾತ್ಮಕ ಅರ್ಜಿಗಳನ್ನು ಪಟ್ಟಿ ಮಾಡಿತ್ತು.

ನಿಮ್ಮ ಮುಖದ ಅಭಿವ್ಯಕ್ತಿಗಳನ್ನು ಓದಲು ನಿಮ್ಮದೇ ಮೊಬೈಲ್ ಅಥವಾ ಕಂಪ್ಯೂಟರ್ ಸಾಧನದ ಫ್ರಂಟ್ ಕ್ಯಾಮರಾವನ್ನು ಬಳಸಲು ಪೇಟೆಂಟ್ ಪಡೆಯುವುದು, ನಿಮ್ಮ ಸಂಭಾಷಣೆಗಳ ಮೇಲೆ ಕಳ್ಳಗಿವಿಯಿರಿಸಲು ನಿಮ್ಮ ಫೋನ್‌ನ ಮೈಕ್ರೋಫೋನ್ ಬಳಸಿಕೊಂಡು, ನೀವು ಯಾವ ಟಿವಿ ಕಾರ್ಯಕ್ರಮವನ್ನು ನೋಡುತ್ತೀರಿ ಅಥವಾ ಜಾಹೀರಾತುಗಳ ಪ್ರದರ್ಶನದ ಸಂದರ್ಭದಲ್ಲಿ ಮ್ಯೂಟ್ ಮಾಡುವಿರಾ ಎಂಬ ಬಗ್ಗೆ ನಿಗಾವಿರಿಸುವುದು. ಇದರ ಜೊತೆಗೆ ನೀವು ವೀಕ್ಷಿಸುವ ಕಾರ್ಯಕ್ರಮಗಳನ್ನು ಗುರುತಿಸಲು ನಿಮ್ಮ ಟಿವಿ ಹೊರಸೂಸುವ ವಿದ್ಯುತ್ ಸಿಗ್ನಲ್‌ಗಳನ್ನು ಬಳಸಿಕೊಳ್ಳಲು ಪೇಟೆಂಟ್ ಪಡೆಯುವುದು, ನೀವು ಎಲ್ಲಿ ವಾಸವಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ನಿಮ್ಮ ಫೋನ್‌ನ ಲೋಕೇಶನ್ ಅನ್ನು ನಡುರಾತ್ರಿಯಲ್ಲೇ ಕಂಡುಕೊಳ್ಳಲು ಅನುಮತಿ ಪಡೆಯುವುದು, ಜನ್ಮದಿನ, ವಿವಾಹ, ಪದವಿ ಪ್ರದಾನ ಮತ್ತಿತರ ನಿಮ್ಮ ಬದುಕಿನ ಪ್ರಮುಖ ಘಟನೆಗಳ ವಿವರಗಳನ್ನು ಮುಂಚಿತವಾಗಿ ತಿಳಿಸಲು ನಿಮ್ಮ ಪೋಸ್ಟ್‌ಗಳು ಹಾಗೂ ಸಂದೇಶಗಳನ್ನು ಬಳಸಿಕೊಳ್ಳುವುದಕ್ಕಾಗಿ ಪೇಟೆಂಟ್ ಪಡೆಯಲು ಫೇಸ್‌ಬುಕ್ ಅರ್ಜಿ ಸಲ್ಲಿಸಿತ್ತು.

2019ರ ಡಿಸೆಂಬರ್ 24ರಂದು, ಫೇಸ್‌ಬುಕ್ ತನ್ನ ಬಳಕೆದಾರರ ಸ್ಮಾರ್ಟ್‌ಫೋನ್, ಕ್ಯಾಮರಾ, ಜಿಪಿಎಸ್, ಕ್ಯಾಪ್ಚರ್ ಆಡಿಯೋ,ಚಿತ್ರಗಳು, ವೀಡಿಯೊ ಅಥವಾ ಲೋಕೇಶನ್ ದತ್ತಾಂಶಗಳನ್ನು ಪಡೆಯುವ ಮೂಲಕ ಅವರು ಯಾವುದನ್ನು ನೋಡುತ್ತಿದ್ದಾರೆ ಎಂಬ ಬಗ್ಗೆ ಬೇಹುಗಾರಿಕೆ ನಡೆಸುವುದಕ್ಕೆ ಅನುಮತಿ ನೀಡುವ ಪೇಟೆಂಟ್ ಅನ್ನು ಪಡೆದುಕೊಂಡಿದೆ. ಆದರೆ ಈ ಪೇಟೆಂಟ್‌ಗಳ ಬಳಕೆಯ ಕುರಿತಾಗಿ ತನ್ನ ನಿಲುವಿನ ಬಗ್ಗೆ ಅದು ಈವರೆಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.2019ರ ನವೆಂಬರ್‌ನಲ್ಲಿ ಅಮೆರಿಕ ಸುದ್ದಿವಾಹಿನಿ ಜಾಲ ಎನ್‌ಬಿಸಿಯು, ಫೇಸ್‌ಬುಕ್‌ನ ಕುರಿತಾದ ಕೆಲವು ಕರಾಳ ಸತ್ಯಗಳನ್ನು ಬಯಲಿಗೆಳೆಯುವಂತಹ 7 ಸಾವಿರ ಪುಟಗಳ ದಾಖಲೆಗಳನ್ನು ಸೋರಿಕೆ ಮಾಡಿತ್ತು. ಫೇಸ್‌ಬುಕ್‌ನ ಉನ್ನತ ಅಧಿಕಾರಿಗಳ ನಡುವೆ ನಡೆದ ಸಭೆಗಳ ಸಂಕ್ಷಿಪ್ತ ವಿವರಗಳು ಹಾಗೂ ಇಮೇಲ್‌ಗಳ ಕುರಿತಾದ ಸಾವಿರಾರು ಪುಟಗಳನ್ನು ಅದು ಒಳಗೊಂಡಿತ್ತು.

ಬಹುರಾಷ್ಟ್ರೀಯ ಆನ್‌ಲೈನ್ ಮಾರ್ಕೆಟಿಂಗ್ ಸಂಸ್ಥೆ ಅಮೆಝಾನ್‌ಗೂ ತನ್ನ ಬಳಕೆದಾರರ ದತ್ತಾಂಶವನ್ನು ಪಡೆದುಕೊಳ್ಳಲು ಫೇಸ್‌ಬುಕ್ ಅವಕಾಶ ನೀಡಿತ್ತು. ಯಾಕೆಂದರೆ ಅಮೆಝಾನ್, ಫೇಸ್‌ಬುಕ್‌ನಲ್ಲಿ ತನ್ನ ಜಾಹೀರಾತುಗಳನ್ನು ಪ್ರಕಟಿಸಲು ಅಪಾರ ಮೊತ್ತದ ಹಣವನ್ನು ವೆಚ್ಚ ಮಾಡುತ್ತಿದೆ ಹಾಗೂ ಅಮೆಝಾನ್‌ನ ಫೈರ್‌ಸ್ಮಾರ್ಟ್‌ಫೋನ್‌ನಲ್ಲಿ ಪಾಲುದಾರಿಕೆಯನ್ನು ಹೊಂದಿದೆ. ಇದೇ ವೇಳೆ ತುಂಬಾ ಜನಪ್ರಿಯಗೊಂಡಿರುವ ಹಾಗೂ ತನ್ನ ಪ್ರತಿಸ್ಪರ್ಧಿಯೆಂದು ಪರಿಗಣಿಸಲಾಗುತ್ತಿರುವ ಇನ್ನೊಂದು ಮೆಸೆಜಿಂಗ್ ಆ್ಯಪ್‌ನ ಸಂಪರ್ಕವನ್ನು ಯೂಸರ್‌ಡೇಟಾದಿಂದ ಕಡಿತಗೊಳಿಸುವ ಬಗ್ಗೆಯೂ ಪೇಸ್‌ಬುಕ್ ಚರ್ಚಿಸಿರುವುದು ಕೂಡಾ ಇದೀಗ ಬೆಳಕಿಗೆ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳು ಬಳಕೆದಾರರ ಖಾಸಗಿತನವನ್ನು ಹರಾಜಿಗಿಟ್ಟಿವೆ. ನಮ್ಮ ಖಾಸಗಿತನ, ಅಭಿರುಚಿ,ಹವ್ಯಾಸಗಳು ಈ ಜಾಲತಾಣಗಳ ಮೂಲಕ ಕಾರ್ಪೊರೇಟ್ ಸಂಸ್ಥೆಗಳಿಗೆ ನಮ್ಮ ಅನುಮತಿಯಿಲ್ಲದೇ ಸೋರಿಕೆಯಾಗುತ್ತಿವೆ. ನಮ್ಮ ಮಾಹಿತಿಗಳನ್ನು ಕಾರ್ಪೊರೇಟ್ ಸಂಸ್ಥೆಗಳು ತಮಗೆ ಬೇಕಾದಹಾಗೆ ಬಳಸಿಕೊಳ್ಳುತ್ತಿವೆ ಹಾಗೂ ಇತರರಿಗೂ ಹಂಚುತ್ತಿವೆ. ಒಟ್ಟಿನಲ್ಲಿ ಇಂದಿನ ಡಿಜಿಟಲ್ ಯುಗದಲ್ಲಿ ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಿಂದ ಅವರಿಗೆ ಅರಿವಿಲ್ಲದೆಯೇ ಶೋಷಣೆಗೊಳಗಾಗುತ್ತಿದ್ದಾರೆ. ನಮ್ಮನ್ನು ಆಳುವ ಸರಕಾರಗಳು ಕೂಡಾ ಈ ಸಾಮಾಜಿಕ ಜಾಲತಾಣಗಳ ‘ನವ ವಸಾಹತುಶಾಹಿ’ಯನ್ನು ಕಂಡೂಕಾಣದಂತೆ ಕುಳಿತಿವೆ. ಜನತೆಯ ಖಾಸಗಿತನಕ್ಕೆ ಲಗ್ಗೆ ಹಾಕುವ ಈ ಸಾಮಾಜಿಕ ಜಾಲತಾಣಗಳಿಗೆ ಅಂಕುಶವಿಡದೇ ಇದ್ದಲ್ಲಿ ಅಪಾಯಕ್ಕೆ ಆಹ್ವಾನ ನೀಡಿದಂತಾಗಲಿದೆ. ಕಾಣದ ಕೈಗಳ ನಿಯಂತ್ರಣಕ್ಕೆ ಸಿಲುಕಿದ ಬಳಿಕ ಪಶ್ಚಾತ್ತಾಪ ಪಡುವುದಕ್ಕಿಂತ, ಅದಕ್ಕೆ ಮೊದಲೇ ಈ ಕುರಿತಂತೆ ವಿಶ್ವವ್ಯಾಪಿಯಾಗಿ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News