ಶಿವಮೊಗ್ಗ: ರ್‍ಯಾಪಿಡ್ ಆಕ್ಷನ್ ಪೋರ್ಸ್ ಘಟಕದ ಶಂಕುಸ್ಥಾಪನೆ ನೆರವೇರಿಸಿದ ಅಮಿತ್ ಶಾ

Update: 2021-01-16 13:07 GMT

ಶಿವಮೊಗ್ಗ, ಜ.16: ಭದ್ರಾವತಿಯ ಬುಳ್ಳಾಪುರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ರ್‍ಯಾಪಿಡ್ ಆಕ್ಷನ್ ಪೋರ್ಸ್(ಆರ್‌ಎಎಫ್)ಘಟಕದ ಶಂಕುಸ್ಥಾಪನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವೇರಿಸಿದರು.

ದಿಲ್ಲಿಯಿಂದ ಶನಿವಾರ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಬರಮಾಡಿಕೊಂಡರು. ನಂತರ ಹೆಲಿಕಾಪ್ಟರ್ ಮುಖಾಂತರ ಭದ್ರಾವತಿಗೆ ಆಗಮಿಸಿದ ಅಮಿತ್ ಶಾ ರ್‍ಯಾಪಿಡ್ ಆಕ್ಷನ್ ಪೋರ್ಸ್ ಘಟಕದ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಮಾತನಾಡಿದ ಅಮಿತ್ ಶಾ, ಭದ್ರಾವತಿಯಲ್ಲಿ ಆರ್ ಎಎಫ್ ಬೆಟಾಲಿಯನ್ ಸ್ಥಾಪನೆಯಿಂದ ಇಡೀ ದಕ್ಷಿಣ ಭಾರತದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಾಯಕವಾಗಲಿದೆ ಎಂದರು.

ಇಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಘಟಕ ನಿರ್ಮಾಣವಾಗಲಿದ್ದು, ರಾಜ್ಯ ಸರಕಾರ 50 ಎಕರೆ ಜಮೀನು ನೀಡಿದೆ. ಇಲ್ಲಿ ಸುಸಜ್ಜಿತವಾದ ವಸತಿ ಗೃಹಗಳು, ಆಸ್ಪತ್ರೆ, ಕೇಂದ್ರೀಯ ವಿದ್ಯಾಲಯ, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣವಾಗಲಿದೆ. ಇದರ ಪ್ರಯೋಜನ ಸ್ಥಳೀಯರಿಗೂ ದೊರೆಯುವಂತೆ ಮಾಡಲಾಗುವುದು. ಸ್ಥಳೀಯರು ಇಲ್ಲಿನ ಎಲ್ಲಾ ಸೌಲಭ್ಯಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾತನಾಡಿ, ಇದೊಂದು ಐತಿಹಾಸಿಕ ದಿನ. ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ 97ಎಕರೆ ಪ್ರದೇಶದಲ್ಲಿ ಆರ್‌ಎಎಫ್ ಘಟಕಕ್ಕೆ ರಾಜ್ಯ ಸರ್ಕಾರ 50 ಎಕರೆ ಪ್ರದೇಶ ನೀಡಿದೆ ಎಂದರು.

ಸಾರಿಗೆ ಸಂಪರ್ಕ ಉತ್ತಮವಾಗಿರುವ ಭದ್ರಾವತಿಯಲ್ಲಿ ಆರ್ ಎಎಫ್ ಘಟಕ ಸ್ಥಾಪನೆಯಿಂದ ತುರ್ತು ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪಡೆಗಳನ್ನು ತರಿಸುವುದು ತಪ್ಪಲಿದೆ. ಇಲ್ಲಿ ಆರಂಬವಾಗಲಿರುವ ಘಟಕ ರಾಜ್ಯದ ಎಲ್ಲಾ ಜಿಲ್ಲೆಗಳು, ಕೇರಳದ ನಾಲ್ಕು, ಗೋವಾದ 2, ಪುದುಚೇರಿ ಮತ್ತು ಲಕ್ಷದ್ವೀಪದ ತಲಾ ಒಂದು ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ತುರ್ತು ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಆರ್‌ಎಎಫ್ ಕೈಜೋಡಿಸಲಿದೆ ಎಂದು ಹೇಳಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಅಶ್ವಥನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಸಂಗಮೇಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News