ಸಿಎಂ ಪುತ್ರ ವಿಜಯೇಂದ್ರ ವಿರುದ್ಧದ ಲಂಚ ಆರೋಪ ಪ್ರಕರಣ: ಸಿಬಿಐ ತನಿಖೆ ಕೋರಿ ಹೈಕೋರ್ಟ್ ಗೆ ಪಿಐಎಲ್

Update: 2021-01-16 13:32 GMT

ಬೆಂಗಳೂರು, ಜ.16: ಮುಖ್ಯಮಂತ್ರಿ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರು ಹಣ ಸುಲಿಗೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣ ಹಾಗೂ ಕೋಲ್ಕತ್ತಾ ಮೂಲದ ಕಂಪೆನಿಗಳು ವಿಜಯೇಂದ್ರ ಮತ್ತು ಶಶಿಧರ್ ಮರಡಿ ಎಂಬವರ ಕಂಪೆನಿಯ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಜನಾಧಿಕಾರ ಸಂಘರ್ಷ ಪರಿಷತ್ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ ಮಾಡಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಈ ಕುರಿತು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ರಾಜ್ಯ ಸರಕಾರ, ಸಿಬಿಐ ಮತ್ತು ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.

ಎಫ್‍ಐಆರ್ ದಾಖಲಿಸಿಕೊಳ್ಳದೆ ಕುಂಟು ನೆಪವೊಡ್ಡಿ ನ್ಯಾಯಾಲಯದ ದಿಕ್ಕು ತಪ್ಪಿಸಲು ಶೇಷಾದ್ರಿಪುರಂನ ಇನ್‍ಸ್ಪೆಕ್ಟರ್ ಕೃಷ್ಣಮೂರ್ತಿ ಅವರು ಕೋರ್ಟ್ ಗೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್ ಕೋರ್ಟ್ ಮೆಟ್ಟಿಲೇರಿತ್ತು. ಈಗ ಇಡೀ ಪ್ರಕರಣವನ್ನು ತನಿಖೆಗೊಳಪಡಿಸಲು ಪಿಐಎಲ್ ದಾಖಲಿಸುವ ಮೂಲಕ ಪ್ರಕರಣವನ್ನು ಇನ್ನಷ್ಟು ವಿಸ್ತರಿಸಿದೆ.

ವಸತಿ ಸಮುಚ್ಛಯ ಕಂಪೆನಿ ನಿರ್ದೇಶಕ ಚಂದ್ರಕಾಂತ್ ರಾಮಲಿಂಗಂ ಎಂಬವರಿಂದ 7.40 ಕೋಟಿಯನ್ನು ಸುಲಿಗೆ ಮಾಡಿದ್ದಾರೆ ಎಂದು ಐಪಿಸಿ ಸೆಕ್ಷನ್ 384, 120(ಬಿ) ಮತ್ತು 34ನ್ನು ಉಲ್ಲೇಖಿಸಿ ಜನಾಧಿಕಾರ ಸಂಘರ್ಷ ಪರಿಷತ್ ಈ ಹಿಂದೆಯೂ ದೂರು ದಾಖಲಿಸಿತ್ತು. ಶಶಿಧರ್ ಮರಡಿ ಅವರು ಹೊಂದಿರುವ ಬ್ಯಾಂಕ್ ಖಾತೆಗೆ 7.4 ಕೋಟಿ ರೂ.ಗಳನ್ನು ನಿರ್ಮಾಣ ಕಂಪೆನಿಯು ಆರ್‍ಟಿಜಿಎಸ್ ಮೂಲಕ ಸಂದಾಯ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು. ಅದೇ ರೀತಿ ವಾಟ್ಸಾಪ್ ಸಂಭಾಷಣೆಯಲ್ಲಿ ನಮೂದಿಸಿದ್ದ ಎಚ್‍ಡಿಎಫ್‍ಸಿ ಬ್ಯಾಂಕ್‍ನ ಶೇಷಾದ್ರಿಪುರಂ ಶಾಖೆಯಲ್ಲಿ ಶಶಿಧರ್ ಮರಡಿ ಹೊಂದಿರುವ ಉಳಿತಾಯ ಖಾತೆಗೆ ಜನಾಧಿಕಾರ ಸಂಘರ್ಷ ಪರಿಷತ್ 100 ರೂ.ನಗದನ್ನು ಪಾವತಿಸಿ ಖಾತೆಯನ್ನು ಖಚಿತಪಡಿಸಿಕೊಂಡಿರುವುದನ್ನೂ ದೂರಿನಲ್ಲಿ ಉಲ್ಲೇಖಿಸಿತ್ತು.

ಅಧಿಕಾರಿ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸದಿರುವುದು ಬಿ.ವೈ.ವಿಜಯೇಂದ್ರ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ನಿರ್ಮಾಣ ಕಂಪೆನಿಗೆ ಬೆದರಿಕೆ ಹಾಕಿ ಹಣ ನೀಡಲು ಒತ್ತಡ ಹೇರಿ ನಿರ್ಮಾಣ ಕಾರ್ಯಕ್ಕೆ ತಡೆ ಹಾಕಿರುವುದು ಸುಲಿಗೆ ಪ್ರಕರಣಕ್ಕೆ ಬಲವಾದ ಸಾಕ್ಷಿ ಎನ್ನಲಾಗಿದೆ.

ವಾಟ್ಸಾಪ್ ಚಾಟ್‍ಗಳಲ್ಲಿ ಶಶಿಧರ್ ಮರಡಿ ಎಂಬವರು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು, ನಂತರ ಹಣ ಪಡೆದಿರುವುದು, ನಗದು ಹಾಗೂ ಆರ್‍ಟಿಜಿಎಸ್ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮತ್ತು ತಮ್ಮ ಸಹಚರರ ಮೂಲಕ ಸಮನ್ವಯ ಮಾಡಲು ತಿಳಿಸಿರುವುದು ಹಾಗೂ ಹಣ ಪಡೆದಿರುವ ಬಗ್ಗೆಯೂ ಖಚಿತಪಡಿಸಿರುವುದು ಈ ಪ್ರಕರಣಕ್ಕೆ ಹೆಚ್ಚಿನ ಪುಷ್ಟಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News