ದಿಲ್ಲಿಯ ರೈತ ಹೋರಾಟದ ಬಗ್ಗೆ ಮಾಧ್ಯಮಗಳಿಂದ ಅಪಪ್ರಚಾರ: ಯೋಗೇಂದ್ರ ಯಾದವ್

Update: 2021-01-16 14:17 GMT

ಬೆಂಗಳೂರು,  ಜ.16: ಕೇಂದ್ರ ಸರಕಾರ ಜಾರಿ ಮಾಡಿರುವ ಜನವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಹೊಸದಿಲ್ಲಿಯಲ್ಲಿ ರೈತರ ನಡೆಸುತ್ತಿರುವ ಹೋರಾಟದ ಕುರಿತು ಮಾಧ್ಯಮಗಳು ಸುದ್ದಿಯ ಹೆಸರಿನಲ್ಲಿ ಸುಳ್ಳುಗಳನ್ನು ಹರಡುತ್ತಿವೆ ಎಂದು ಎಐಕೆಎಸ್‍ಸಿಸಿ ಸಂಚಾಲಕ ಯೋಗೇಂದ್ರ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ರೈತ, ದಲಿತ, ಕಾರ್ಮಿಕ ಜನಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ದಿಲ್ಲಿಯ ರೈತರ ಹೋರಾಟದ ಕುರಿತು ಆಯೋಜಿಸಿದ್ದ ಮುಕ್ತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳ ತಿದ್ದುಪಡಿ ಮೂಲಕ ರೈತರಿಗೆ ಚಾರಿತ್ರಿಕ ಉಡುಗೊರೆ ನೀಡುತ್ತಿದ್ದೇವೆಂದು ಹೇಳುತ್ತಿದ್ದಾರೆ. ಈ ಬಗ್ಗೆ ರೈತರ ಅಭಿಪ್ರಾಯವನ್ನು ಕೇಳದೆ, ಪ್ರಧಾನಿ ಮೋದಿ ಮಾತನ್ನೇ ಪ್ರಧಾನವಾಗಿ ಬಿಂಬಿಸುತ್ತಿರುವ ಮಾಧ್ಯಮಗಳು, ರೈತರ ಅಭಿಪ್ರಾಯಗಳನ್ನು, ಹೋರಾಟವನ್ನು ಬದಿಗೆ ಸರಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಆರೋಪಿಸಿದ್ದಾರೆ.

ರೈತರೊಂದಿಗೆ ಸಮಾಲೋಚನೆ ನಡೆಸಿಯೇ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದ್ದೇವೆಂದು ಹೇಳುತ್ತಿದ್ದಾರೆ. ಆದರೆ, ಈ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ಪ್ರಮುಖ ರೈತ ಸಂಘಟನೆಗಳ ನಾಯಕರು ಹೊಸದಿಲ್ಲಿಯ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಹಾಗಾದರೆ, ಇವರು ಯಾವ ರೈತರ ಜೊತೆ ಚರ್ಚಿಸಿದ್ದಾರೆ ? ಚರ್ಚಿಸಿದ್ದರೆ ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ರೈತರ ಹೋರಾಟವನ್ನು ಕೇವಲ ಪಂಜಾಬ್‍ಗೆ ಸೀಮಿತಗೊಳಿಸುವಂತಹ ಪ್ರಚಾರ ನಡೆಯುತ್ತಿದೆ. ಆದರೆ, ಪಂಜಾಬ್, ಹರ್ಯಾಣ ರಾಜ್ಯಗಳ ರೈತರು ಇಡೀ ದೇಶದ ರೈತರ ಪರವಾಗಿ ಚಾರಿತ್ರಿಕ ಹೋರಾಟದಲ್ಲಿ ತೊಡಗಿದ್ದಾರೆ. ಇವರ ಹೋರಾಟಕ್ಕೆ ದೇಶ-ವಿದೇಶಗಳಿಂದ ಅಭೂತಪೂರ್ವಕವಾದಂತಹ ಬೆಂಬಲ ವ್ಯಕ್ತವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಕಿಸಾನ್ ಮಹಾಸಂಘದ ರಾಷ್ಟ್ರೀಯ ಸಂಚಾಲಕ ಕೆ.ವಿ.ಬಿಜು ಮಾತನಾಡಿ, ನೂತನ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸಿದ ರೈತರ ಮೇಲೆ ಪೊಲೀಸರು ಲಾಠಿ ಬೀಸಿದರು. ಫೈರಿಂಗ್ ಮಾಡಿದರು. ಪೊಲೀಸ್ ಹಾಗೂ ಕೇಂದ್ರ ಸರಕಾರದ ಇಂತಹ ಪ್ರತಿರೋಧಗಳನ್ನು ಮೀರಿ ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.

ಕೃಷಿ ಕಾಯ್ದೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ, ಕೃಷಿ ಸಚಿವರು ನಿರಂತರವಾಗಿ ಸುಳ್ಳು ಹೇಳಿದ್ದಾರೆ. ಹೀಗಾಗಿ ಕಿಸಾನ್ ಸಂಘದ ವತಿಯಿಂದ ಪುಸ್ತಕವನ್ನು ಪ್ರಕಟಿಸಿ ಜಾಗೃತಿ ಮೂಡಿಸಿ, ರೈತರ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದೇವೆಂದು ಅವರು ತಿಳಿಸಿದ್ದಾರೆ.

ಈ ಸಂವಾದ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಶಿವಸುಂದರ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ರೈತ ನಾಯಕ ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಡಾ.ಪ್ರಕಾಶ್ ಕಮ್ಮರಡಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ದೇಶದ ರೈತರಿಗೆ ಉಡುಗೊರೆ ಕೊಡುವುದೇ ಆದರೆ, ಈಗ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಹಾಗೂ ಕೃಷಿ ಉತ್ಪನ್ನಗಳಿಗೆ ಬೆಂಬಲ ನೀಡಬೇಕು. ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‍ಗೆ ಆರು ಸಾವಿರ ರೂ. ನೀಡಬೇಕು. ಆದರೆ, ಬಿಜೆಪಿ ನಾಯಕರು ಬೆಂಬಲ ಬೆಲೆ ಜಾರಿ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ನರೇಂದ್ರ ಮೋದಿ ರೈತರಿಗೆ ಗಿಫ್ಟ್ ಹೆಸರಿನಲ್ಲಿ ಶಿಕ್ಷೆ ನೀಡುತ್ತಿದ್ದಾರೆ. ಗಣರಾಜ್ಯೋತ್ಸವ ದಿವಸ ಕೆಂಪುಕೋಟೆಯ ಮುಂಭಾಗ ಪೆರೇಡ್ ನಡೆಸುವ ಸೈನಿಕರು ರೈತ ಮಕ್ಕಳಾಗಿದ್ದಾರೆ. ಹೀಗಾಗಿ ಅವರಿಗೆ ಯಾವುದೇ ಸಮಸ್ಯೆ ಮಾಡುವುದು ರೈತರ ಉದ್ದೇಶವಲ್ಲ. ಈ ಕುರಿತು ಉದ್ದೇಶಪೂರ್ವಕವಾಗಿಯೇ ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮದು ಶಾಂತಿಯುತ ಪ್ರತಿಭಟನೆಯಾಗಿದೆ.

-ಯೋಗೇಂದ್ರ ಯಾದವ್, ರೈತ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News