ಅಮಿತ್ ಶಾ ಬೆಳಗಾವಿ ಸಮಾವೇಶ ರದ್ದುಗೊಳಿಸುವಂತೆ ಆಗ್ರಹಿಸಿ ಧರಣಿ

Update: 2021-01-16 14:36 GMT
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಅವರನ್ನು ಸಿಎಂ ಹೂ ನೀಡಿ ಸ್ವಾಗತಿಸಿದರು

ಬೆಳಗಾವಿ, ಜ.16: ಗೃಹ ಸಚಿವ ಅಮಿತ್ ಶಾ ಅವರು ಇಂದು(ಜ.17) ಪಾಲ್ಗೊಳ್ಳಲಿರುವ ಜನ ಸೇವಕ ಸಮಾವೇಶ ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಜನ ಸೇವಕ ಸಮಾವೇಶ ರದ್ದುಪಡಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಭೀಮಪ್ಪ ಗಡಾದ, ಕೋವಿಡ್-19 ಸೋಂಕಿನ ಪ್ರಕರಣಗಳು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಸಮಾವೇಶ ರದ್ದುಪಡಿಸಬೇಕು. ಆದರೆ, ಸರಕಾರ ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನು, ಸಮಾವೇಶಕ್ಕೆ ಪರವಾನಿಗೆ ನೀಡಿರುವ ಕುರಿತು ಮಾಹಿತಿ ಕೇಳಿದರೆ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಸರಿಯಾದ ಉತ್ತರ ಕೊಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್-19 ಮಾರ್ಗಸೂಚಿ ಪ್ರಕಾರ ವ್ಯಕ್ತಿಯಿಂದ ವ್ಯಕ್ತಿಗೆ 5 ಅಡಿ ಅಂತರ ಕಾಪಾಡಿಕೊಳ್ಳಬೇಕು. ಆದರೆ ಬಿಜೆಪಿಯವರು 2 ರಿಂದ 3 ಲಕ್ಷ ಜನರನ್ನು ಸೇರಿಸುವುದಾಗಿ ಹೇಳಿದ್ದಾರೆ. ಇದರಿಂದ ಸುರಕ್ಷಿತ ಅಂತರ ಕಾಪಾಡಲು ಸಾಧ್ಯವಿಲ್ಲ. ಸಾಮಾನ್ಯ ಜನರಿಗೆ ಮಾಸ್ಕ್ ಹಾಕದಿದ್ದರೆ ದಂಡ ಹಾಕುತ್ತಾರೆ. ಆದರೆ ಯಾವುದೇ ಸಚಿವರು ಮಾಸ್ಕ್ ಧರಿಸುತ್ತಿಲ್ಲ. ಅವರಿಗೊಂದು ಕಾನೂನು, ಜನ ಸಾಮಾನ್ಯರಿಗೊಂದು ಕಾನೂನು ಉಂಟೇ ಎಂದು ವಾಗ್ದಾಳಿ ನಡೆಸಿದರು.

ಸಮಾವೇಶವನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ಸಮಾವೇಶದ ವೇದಿಕೆಯಲ್ಲಿರುವವರು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಸಮಾವೇಶ ದೃಶ್ಯಾವಳಿಗಳನ್ನು ಸಂಗ್ರಹಿಸಿಕೊಂಡು ಸಾಕ್ಷಿಯೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗುವುದೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News