ಬಕೆಟ್ ಹಿಡಿದವರಿಗೆ ಮಾತ್ರ ಸಚಿವ ಸ್ಥಾನ: ಸಿಎಂ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ

Update: 2021-01-16 15:55 GMT

ಮಡಿಕೇರಿ, ಜ.16: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಕೊಡಗು ಜಿಲ್ಲೆಯ ಶಾಸಕರನ್ನು ಕಡೆಗಣಿಸಿರುವುದಕ್ಕೆ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಬಕೆಟ್ ಹಿಡಿದವರಿಗೆ ಮಾತ್ರವೇ ಸಚಿವ ಸ್ಥಾನ ಸಿಕ್ಕಿದೆ ಎಂದು ಪರೋಕ್ಷವಾಗಿ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಂಜನ್, 1980ರ ದಶಕದಲ್ಲಿ ಪಕ್ಷ ಪ್ರಾರಂಭವಾದ ಸಂದರ್ಭ ಪ್ರಾಮಾಣಿಕವಾಗಿ, ಘನತೆ, ಗೌರವದಿಂದ ಪಕ್ಷ ಕಟ್ಟಿದವರನ್ನು ಕಡೆಗಣಿಸಲಾಗಿದೆ. ಪಕ್ಷದ ವಿಚಾರಗಳನ್ನು ಬೀದಿಗೆ ತರದೇ, ಸಂಘಪರಿವಾರ ಹೇಳಿದಂತೆ ಕೇಳಿದ್ದೆ ಎಂದು ಅಸಮಾಧಾನ ಹೊರ ಹಾಕಿದರು. ಈ ಬಗ್ಗೆ 10 ದಿನದ ಒಳಗೆ ಕೇಂದ್ರ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸುವುದಾಗಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.

ಸೈನಿಕನ ಬಗ್ಗೆ ಗೊತ್ತಿದೆ: ಇನ್ನು ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಸಿ.ಪಿ. ಯೋಗೇಶ್ವರ್ ಅವರ ಹೆಸರು ಹೇಳದೆಯೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಅಪ್ಪಚ್ಚು ರಂಜನ್, ಸೈನಿಕನ ಬಗ್ಗೆ ಎಲ್ಲವೂ ಗೊತ್ತಿದೆ. ಎಚ್.ವಿಶ್ವನಾಥ್ ಹೇಳಿರುವುದು ಕೂಡ ಸತ್ಯವಾಗಿದೆ. ತಾನು ಹುಣಸೂರು ಉಪ ಚುನಾವಣಾ ಉಸ್ತುವಾರಿಯಾಗಿದ್ದ ಸಂದರ್ಭ ಸೈನಿಕ ಚುನಾವಣೆಗೆ ಎರಡು ದಿನ ಮುನ್ನ ಏನು ಮಾಡಿದ್ದ ಎಂಬುದು ಕೂಡ ನನ್ನ ಗಮನಕ್ಕೆ ಬಂದಿದೆ. ಹುಣಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಸೈನಿಕನೇ ಕಾರಣ ಎಂದು ಆರೋಪಿಸಿದರಲ್ಲದೇ, ವಿಶ್ವನಾಥ್ ಅವರ ಹೇಳಿಕೆಯನ್ನು ಅಪ್ಪಚ್ಚು ರಂಜನ್ ಸಮರ್ಥಿಸಿಕೊಂಡರು. ಇಂತಹವರಿಗೆ ಸಚಿವ ಸ್ಥಾನ ನೀಡಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಸಿಡಿ’ ವಿಚಾರದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ರಂಜನ್ ಹೇಳಿದರು.

200 ಕೋಟಿ ರೂ. ಯಾಕೆ?: ಇನ್ನು ಯಡಿಯೂರಪ್ಪ ಅವರು ಶಾಸಕ ಝಮೀರ್ ಅಹ್ಮದ್ ಕ್ಷೇತ್ರಕ್ಕೆ 200 ಕೋಟಿ ರೂ. ಅನುದಾನ ಒದಗಿಸಿದ್ದಾರೆಂಬ ಹೇಳಿಕೆ ಬಗ್ಗೆ ಅಪ್ಪಚ್ಚು ರಂಜನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಬೆಟ್ಟ ಗುಡ್ಡಗಳು ಕುಸಿದು ಸಂಕಷ್ಟದಲ್ಲಿದ್ದೇವೆ. ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಗೆ ಅನುದಾನ ನೀಡಲು ಮೊದಲ ಪ್ರಾತಿನಿಧ್ಯ ನೀಡಬೇಕಿತ್ತು. ನಗರ ಪ್ರದೇಶದ ಒಂದೇ ಕ್ಷೇತ್ರಕ್ಕೆ 200 ಕೋಟಿ ರೂ. ಅನುದಾನ ಬೇಕೆ ಎಂದು ಪ್ರಶ್ನಿಸಿದರಲ್ಲದೇ, ಅನುದಾನ ನೀಡಿರುವುದಕ್ಕೂ ತೀವ್ರ ಖಂಡನೆ ವ್ಯಕ್ತಪಡಿಸಿದರು. ಈ ತಾರತಮ್ಯ ಧೋರಣೆಯನ್ನು ಪ್ರಶ್ನಿಸಲೇಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News