ಭದ್ರಾವತಿಯ ಅಮಿತ್ ಶಾ ಭಾಗಿಯಾದ ಕಾರ್ಯಕ್ರಮದಲ್ಲಿ ಕನ್ನಡ ರಹಿತ ನಾಮಫಲಕ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ

Update: 2021-01-16 17:37 GMT
Picture: facebook.com/CMofKarnataka/

ಶಿವಮೊಗ್ಗ: ಭದ್ರಾವತಿಯ ಬುಳ್ಳಾಪುರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ರ್‍ಯಾಪಿಡ್ ಆಕ್ಷನ್ ಪೋರ್ಸ್(ಆರ್‌ಎಎಫ್)ಘಟಕದ ಶಂಕುಸ್ಥಾಪನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ನೇರವೇರಿಸಿದ್ದು, ಭದ್ರಾವತಿಯಲ್ಲಿ ಆರ್‌ಎಎಫ್ ಬೆಟಾಲಿಯನ್ ಸ್ಥಾಪನೆಯಿಂದ ಇಡೀ ದಕ್ಷಿಣ ಭಾರತದ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಾಯಕವಾಗಲಿದೆ ಅಮಿತ್ ಶಾ ಅವರು ತಿಳಿಸಿದ್ದಾರೆ.

ಆದರೆ ರ್‍ಯಾಪಿಡ್ ಆಕ್ಷನ್ ಪೋರ್ಸ್ ಶಂಕುಸ್ಥಾಪನೆಗೆ ಅಳವಡಿಸಲಾಗಿದ್ದ ನಾಮಫಲಕದಲ್ಲಿ ಕನ್ನಡ ಮಾಯವಾಗಿದ್ದು, ಕನ್ನಡ ರಹಿತ ನಾಮಫಲಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಕರ್ನಾಟಕವೋ ಅಥವಾ ಉತ್ತರ ಭಾರತದ ರಾಜ್ಯವೋ ಎಂದು ಹಲವರು ಪ್ರಶ್ನಿಸಿದ್ದಾರೆ. ಗೋಡೆಯಲ್ಲಿ ಅಳವಡಿಸಲಾದ ಈ ನಾಮಫಲಕದ ಒಂದು ಬದಿಯಲ್ಲಿ ಹಿಂದಿ ಭಾಷೆಯಲ್ಲಿ ಬರೆದಿದ್ದರೆ, ಇನ್ನೊಂದು ಬದಿಯಲ್ಲಿ ಇಂಗ್ಲಿಷ್ ನಲ್ಲಿ ಬರೆಯಲಾಗಿದೆ. ಆದರೆ ಕನ್ನಡದಲ್ಲಿ ಎಲ್ಲೂ ಮಾಹಿತಿ ಇಲ್ಲ. 

ಶಂಕುಸ್ಥಾಪನೆಯ ಫೋಟೋ ಸಹಿತ @CMofKarnataka ಫೇಸ್ಬುಕ್ ಖಾತೆಯಲ್ಲಿ ಕಾರ್ಯಕ್ರಮದ ಬಗ್ಗೆ ಪೋಸ್ಟ್ ಮಾಡಲಾಗಿದ್ದು, ಕಮೆಂಟ್ ಮೂಲಕ ಹಲವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 350ಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದು, 2,500 ಮಂದಿ ಪೋಸ್ಟ್ ಲೈಕ್ ಮಾಡಿದ್ದಾರೆ.

''ಯಡಿಯೂರಪ್ಪ ನವರೇ, ನೀವು ಕರ್ನಾಟಕದ ಮುಖ್ಯಮಂತ್ರಿಗಳೋ ಅಥವಾ ಅಧಿಕಾರದ ದುರಾಸೆಗೆ ಕನ್ನಡ ಕೊಲೆಗಾರರೋ. ಕನ್ನಡ ಕರ್ನಾಟಕ ಅಸ್ಮಿತೆ ಉಳಿಸುವ ಯೋಗ್ಯತೆ ಇಲ್ಲಾ ಅಂದ್ರೆ ನೀವೆಲ್ಲಾ ಯಾಕೆ ಕರ್ನಾಟಕದ ಮುಖ್ಯಮಂತ್ರಿಯಾಗ್ತಿರಿ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕನ್ನಡ, ಕರ್ನಾಟಕವನ್ನು ಉಳಿಸಿ'' ಎಂದು ರಿಶಿ ರಾಜ್ ಎಂಬವರು ಕಮೆಂಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡವಿಲ್ಲದೇ ಕಾರ್ಯಕ್ರಮ ನಡೆಸುವುದು ಯಾವ ಪುರುಷಾರ್ಥಕ್ಕೆ ಮುಖ್ಯಮಂತ್ರಿಗಳೇ? ಇಲ್ಲಿಯವರೆಗೆ ಕನ್ನಡಾನೂ ಇದೆಯಲ್ಲ ಎಂದು ಸಮಜಾಯಿಷಿ ನೀಡುತ್ತಿದ್ದ ನೀವು ಇಂದು ಕನ್ನಡಾನೇ ಮಾಯ ಮಾಡಿದ್ದೀರಲ್ಲ. ನೀವೇನು ಕರ್ನಾಟಕದ ಮುಖ್ಯಮಂತ್ರಿನೋ ಅಥವಾ ಉತ್ತರ ಪ್ರದೇಶದ ಮುಖ್ಯಮಂತ್ರಿನೋ ? ಎಂದು ಟಿ.ಟಿ ದೇವಪ್ಪ ಎಂಬವರು ಪ್ರಶ್ನಿಸಿದ್ದಾರೆ. 

ಶಿವಮೊಗ್ಗ ಜಿಲ್ಲೆ ಕನ್ನಡ ಕವಿಗಳ ಧಾರೆ ಎಳೆದ ಜಿಲ್ಲೆ. ನೀವು ಕನ್ನಡಕ್ಕೆ, ಶಿವಮೊಗ್ಗ ಜಿಲ್ಲೆಗೆ ಮಾಡಿದ ದೊಡ್ಡ ಅಪಮಾನ. ಕರ್ನಾಟಕಕ್ಕೆ ದೊಡ್ಡ ಕಳಂಕ. ಹಿಂದಿ ಹೇರಿಕೆ ಯಾಕೆ ? ಯಾರನ್ನು ಓಲೈಸಲು ಈ ಹಿಂದಿ. ದಿಕ್ಕಾರ ಎಂದು ಚನ್ನಕೇಶವ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಓಹೋ. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮನಾ? ನಾವೆಲ್ಲೋ ಉತ್ತರ ಪ್ರದೇಶವೋ, ಮಧ್ಯಪ್ರದೇಶವೋ, ಬಿಹಾರದಲ್ಲೋ ನಡೆದ ಕಾರ್ಯಕ್ರಮ ಎಂದುಕೊಂಡೆವು. ಎಲ್ಲೂ ಸಹ ಒಂದೇ ಒಂದು ಕನ್ನಡ ಪದ ಇಡೀ ಪೋಸ್ಟ್ ಗಳಲ್ಲಿ ಕಂಡುಬಂದಿಲ್ಲ. ಕೇವಲ ಹಿಂದಿ ಮತ್ತು ಇಂಗ್ಲಿಷ್ ಮಯವಾಗಿದೆ ಎಂದು ಪ್ರಗತ್ ಕೆ.ಆರ್ ಎಂಬವರು ಕಮೆಂಟ್ ಮಾಡಿದ್ದಾರೆ.

ನಿಮ್ಮನ್ನು ಮುಖ್ಯಮಂತ್ರಿಗಳಾಗಿ ಪಡೆದ ನಾವೇ ಧನ್ಯರು. ಕರ್ನಾಟಕದಲ್ಲಿ ಕನ್ನಡ ಭಾಷೆ ಮಾಯ ! ಸ್ವಾರ್ಥ ರಾಜಕಾರಣಕ್ಕೆ ಕನ್ನಡಕ್ಕೆ ಅಪಮಾನ ಮಾಡುವುದು ಎಷ್ಟು ಸರಿ ಸಿಎಂ ಅವರೇ ಎಂದು ಶಿವು ಕನ್ನಡಿಗ ಎಂಬವರು ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನವರೇ, ಕರ್ನಾಟಕದಲ್ಲಿ ಕನ್ನಡ ಕಡೆಗಣಿಸಿ ನೀವು ಸಾಧಿಸುವುದಾದರು ಏನು? ನಾಡು ನುಡಿಯ ಬಗ್ಗೆ ಗೌರವ ಇರಲಿ ಎಂದು ಮಳವಳ್ಳಿ ಕುಮಾರ್ ಎಂಬವರು ಮನವಿ ಮಾಡಿದ್ದು, 'ಅಲ್ಲಿ ನೆರೆದಿದ್ದ ಸಾವಿರಾರು ಕನ್ನಡದ ಜನರನ್ನು ಕಡೆಗಣಿಸಿ, ನೆರೆದಿದ್ದ ಕೇವಲ ನಾಲ್ಕಾರು ಮಂದಿಗೋಸ್ಕರ ಕನ್ನಡ ಕಡೆಗಣನೆ ತಪ್ಪಲ್ಲವೇ ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳೇ ಎಂದು ಗಿರೀಶ್ ಎಂಬವರು ಪ್ರಶ್ನೆ ಮಾಡಿದ್ದಾರೆ.

ರಾಷ್ಟ್ರಕವಿ ಕುವೆಂಪು ಹುಟ್ಟಿದ ಮಣ್ಣು ಶಿವಮೊಗ್ಗದಲ್ಲಿ ಕನ್ನಡದ ಗತಿ ನೋಡಿ! #StopHindiImperialism ಎಂದು ವಿವೇಕ್ ಮಂಗನುರೆ (ವಿಮಾ) ಎಂಬವರು ಕಮೆಂಟ್ ಮಾಡಿದ್ದಾರೆ. 

ಇಂಗ್ಲೀಷ್ ಮರದ ದೊಣ್ಣೆಯಾದರೆ ಹಿಂದಿ ಕಬ್ಬಿಣದ ಸಲಾಕೆ ಎಂದು ಹೇಳುತ್ತಾ ಕುವೆಂಪು ಹಿಂದಿ ಹೇರಿಕೆ ವಿರುದ್ಧ ಮಾತಾಡಿದ್ದರು. ಇಂದು ಅವರು ಹುಟ್ಟಿದ ಜಿಲ್ಲೆಯಲ್ಲೇ ಕನ್ನಡವು ಮಾಯವಾಗುವಂತೆ ನಾಗಪುರದ ಸಂತತಿಗಳು ಮಾಡಿದ್ದಾರೆ. ಈಗಲಾದರೂ ಕನ್ನಡಿಗರು ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸಬೇಕು ಎಂದು ಮಲ್ಲಿಕಾರ್ಜುನ್ ಭಾಸ್ಕರ್ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡವೆಲ್ಲಿದೆ ಮುಖ್ಯಮಂತ್ರಿಗಳೇ...?? ನೀವೆಲ್ಲ ಯಾಕಿಷ್ಟು ಗುಲಾಮಗಿರಿಗೆ ಒಳಗಾಗಿದ್ದೀರಿ...??? ಎಂದು ಸಂಜಯ್ ಜಿ.ಡಿ. ಎಂಬವರು ಪ್ರಶ್ನೆ ಮಾಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ, ಎಲ್ಲಿದೆ ಕನ್ನಡದ ನಾಮಫಲಕ. ಕನ್ನಡ ಭಾಷೆ ಬಗ್ಗೆ ಯಾಕೆ ಈ ಉದಾಸೀನ ನಿಮ್ಮ ಸರ್ಕಾರಕ್ಕೆ ? ಕನ್ನಡಿಗರ ಓಟು ಬೇಕು, ಕನ್ನಡಿಗರ ತೆರಿಗೆ ಬೇಕು. ಆದರೆ ಕನ್ನಡ ಭಾಷೆ ಮಾತ್ರ ಬೇಡ ಅಲ್ಲವೇ. ಚೆನ್ನಾಗಿದೆ ನಿಮ್ಮ ಈ ದ್ವಿಮುಖ ನೀತಿ. ನಮಗೆ ನಿಮ್ಮ ಕನ್ನಡ ಟ್ಟೀಟ್ ಬೇಡ. ನಮ್ಮ ಕನ್ನಡ ನಾಡಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯಾವುದೇ ಕಾರ್ಯಕ್ರಮ ಮತ್ತು ಕಾಮಗಾರಿಗಳನ್ನು ಉದ್ಘಾಟಿಸುವಾಗ ನಮ್ಮ ಕನ್ನಡ ಭಾಷೆಯ ನಾಮಫಲಕ ಹಾಕಿ ನಮ್ಮ ಭಾಷೆಗೆ ಸಿಗಬೇಕಾದ ಗೌರವವನ್ನು ನೀಡಿ ಎಂದು ವಸಂತ್ ಕುಮಾರ್ ಎಂಬವರು ಮನವಿ ಮಾಡಿದ್ದಾರೆ.

ಕನ್ನಡ ಎಲ್ಲಿ ಯಡಿಯೂರಪ್ಪನವರೇ ? ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ರೆಡಿ ನೀವು. ಗುಜರಾತಿವಾಲಗಳ‌ ಭಾಷೆಯಲ್ಲಿ ನಿಮಗೆ ಬ್ಯಾನರ್, ಕಲ್ಲಿನ ಮೇಲೆ ಕೆತ್ತನೆ ಮಾಡಲು ಆಗುತ್ತೆ. ಕನ್ನಡದಲ್ಲಿ ಬರೆಯಲು ನಿಮಗೆ ಕಷ್ಟ. ಅವರಿಗೆ ನೀವು ಇಷ್ಟ ಆಗಬೇಕಲ್ಲವೇ, ಅದಕ್ಕೆ ಕನ್ನಡ ಇಲ್ಲ ಎಂದು ಸಲ್ಮಾನ್ ಎಂಬವರು ಕಿಡಿಕಾರಿದ್ದಾರೆ.

ಕನ್ನಡ ನಾಡಿನಲ್ಲಿ ಕಾರ್ಯಕ್ರಮ ಮಾಡಿದ್ದೀರಿ. ಆದರೆ ಒಂದೇ ಒಂದು ಕನ್ನಡ ಪದ ಬೇಡವೇ. ನಿಮಗೆ ನನ್ನದೊಂದು ಧಿಕ್ಕಾರವಿರಲಿ ಎಂದು ಸಿದ್ದು ಕನ್ನಡಿಗ
ಎಂಬವರು ಕಮೆಂಟ್ ಮಾಡಿದ್ದು, ಸರ್ಕಾರ ಉಳಿಸಿಕೊಳ್ಳಲು ಇಂತಹ ಕೆಲಸ ಮಾಡುತ್ತಿದ್ದೀರಲ್ವಾ. ನಿಮಗೆ ಮನುಷ್ಯತ್ವ ಇಲ್ಲವೇ. ಇಲ್ಲಿನ ನಾಡು ನುಡಿ ಸಂಸ್ಕೃತಿ ಗೆ ಮೊದಲು ಬೆಲೆ ಕೊಡಿ ಎಂದು ಭರತ್ ರಾಜ್ ಎಂಬವರು ಮನವಿ ಮಾಡಿದ್ದಾರೆ.

''ನಾಗಪುರ ನೆಕ್ಕಿಗರನ್ನು ಅಧಿಕಾರಕ್ಕೆ ತಂದ ತಪ್ಪಿಗೆ ಇದೆಲ್ಲ ನಮಗೆ ಆಗಬೇಕಾಗಿತ್ತು. ಕರ್ನಾಟಕವನ್ನು ಹಿಂದೀಸ್ಥಾನ ಎಂದು ನಾಮಕರಣ‌ ಮಾಡುವುದೊಂದು ಬಾಕಿ ಇದೆ ನೋಡಿ'' ಎಂದು ದಿನೇಶ್ ಕುಮಾರ್ ಎಂಬವರು ಪೋಸ್ಟ್ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಇಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪ ಕ್ಷಿಪ್ರ ಕಾರ್ಯಪಡೆ ಬೆಟಾಲಿಯನ್ ಸ್ಥಾಪನೆಗೆ ಮುಖ್ಯಮಂತ್ರಿ...

Posted by Chief Minister of Karnataka on Saturday, 16 January 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News