ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಜ.20 ರಂದು ರಾಜಭವನ ಮುತ್ತಿಗೆ: ಮಾಜಿ ಸಚಿವ ರಮಾನಾಥ ರೈ

Update: 2021-01-16 18:09 GMT

ಮೈಸೂರು,ಜ.16: ಕೇಂದ್ರ ಸರ್ಕಾರದ ಧೋರಣೆಗಳು ಸರಿಯಿಲ್ಲ. ಪೆಟ್ರೋಲ್ ಡೀಸಲ್ ಬೆಲೆ ಏರಿಕೆ ಆಗುತ್ತಲೇ ಇದೆ. ಇತ್ತ ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ಜನವರಿ 20 ರಂದು ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ರಾಜಭವನ ಮುತ್ತಿಗೆ ಹಾಕಲು ನಿರ್ಧಾರಿಸಲಾಗಿದೆ ಎಂದು ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.20ರ ಶನಿವಾರ ಬೆಳಗ್ಗೆ 11ಕ್ಕೆ ರಾಜಭವನ ಮುತ್ತಿಗೆ ಹಾಕುತ್ತೇವೆ. ಮುತ್ತಿಗೆ ಹಾಕುವುದರ ಜೊತೆಗೆ ಕೃಷಿ ಕಾನೂನುಗಳನ್ನು ವಿರೋಧಿಸಿ ಫ್ರೀಡಂ ಪಾರ್ಕ್ ನಿಂದ ಮೆರವಣಿಗೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ರೈತರು ಸತತ 50 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. 9 ಸುತ್ತಿನ ಸಭೆ ನಡೆದರೂ ಫಲ ನೀಡದೇ ಪ್ರತಿಭಟನೆಯಲ್ಲಿ ಕೆಲ ರೈತರು ಅಸುನೀಗಿದ್ದಾರೆ. ಕಾಂಗ್ರೆಸ್ ಪಕ್ಷ ಸದಾ ರೈತರ ಪರವಾಗಿ ಇರುತ್ತದೆ. ರೈತರ ಪರವಾಗಿ ಒಂದು ಅಭಿಯಾನ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ಮೆರವಣಿಗೆಯಲ್ಲಿ ಎಲ್ಲಾ ಜಿಲ್ಲೆಯ ಕೆಪಿಸಿಸಿ,ಜಿಲ್ಲಾ ಕಾಂಗ್ರೆಸ್ ಸದಸ್ಯರು, ಹಾಲಿ, ಮಾಜಿ ಜನಪ್ರತಿನಿಧಿಗಳು ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಎಲ್ಲಾ ರಾಜ್ಯದಲ್ಲೂ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಶಿವಣ್ಣ, ಹೆಡತಲೆ ಮಂಜುನಾಥ್, ಶಿವಣ್ಣ, ಸೋಮಶೇಖರ್, ಶಿವು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಪಂಚದ ಎಲ್ಲಾ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ತಮ್ಮ ಮುಂದೆ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಗಮನವಿಲ್ಲ. ಖುದ್ಧು ರೈತರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವ ಸೌಜನ್ಯ ಕೂಡ ಇಲ್ಲ. ರೈತರಿಗಿಂತ ಇವರಿಗೆ ಉದ್ಯಮಿಗಳು, ಬಂಡವಾಳ ಶಾಹಿಗಳೇ ಮುಖ್ಯವಾಗಿದ್ದಾರೆ.
-ನಾಸಿರ್ ಹುಸೇನ್, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News