ಬೆಳಗಾವಿಯಲ್ಲಿ 'ಗೋ ಬ್ಯಾಕ್ ಅಮಿತ್ ಶಾ' ಪ್ರತಿಭಟನೆ : ರೈತರ ಬಂಧನ

Update: 2021-01-17 12:22 GMT

ಬೆಳಗಾವಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿ ಜಿಲ್ಲೆ ಭೇಟಿಯನ್ನು ವಿರೋಧಿಸಿ ರೈತ ಸಂಘಟನೆಗಳ ನೂರಾರು ಕಾರ್ಯಕರ್ತರು ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಅರೆಬೆತ್ತಲೆ ಪ್ರದರ್ಶನ, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕೇಂದ್ರ ಸರಕಾರದ ಕೃಷಿ ಮಸೂದೆ ಜಾರಿಯನ್ನು ವಿರೋಧಿಸಿ ರವಿವಾರ ಅಮಿತ್ ಶಾ ವಿರುದ್ಧ ಪ್ರತಿಭಟನೆ ನಡೆಸಿದ ರೈತರು, ‘ಅಮಿತ್ ಶಾ ವಾಪಸ್ ಹೋಗಿ, ಗೋ ಬ್ಯಾಕ್ ಅಮಿತ್ ಶಾ, ರೈತ ವಿರೋಧಿ ಕೇಂದ್ರಕ್ಕೆ ಹಾಗೂ ಪ್ರಧಾನಿ ಮೋದಿಗೆ ಧಿಕ್ಕಾರ' ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು,  ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹೊಸದಿಲ್ಲಿಯಲ್ಲಿ 57 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ರೈತರಿಗೆ ಸ್ಪಂದಿಸಿಲ್ಲ. ರೈತರ ಸರಕಾರವೆಂದು ಹೇಳುತ್ತಲೇ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ದೂರಿದರು.

ರೈತ ವಿರೋಧಿಯಾಗಿರುವ ಕೇಂದ್ರ ಸರಕಾರದ ಪ್ರತಿನಿಧಿಯಾಗಿರುವ ಗೃಹ ಸಚಿವ ಅಮಿತ್ ಶಾ ಅವರ ಬೆಳಗಾವಿ ಭೇಟಿಗೆ ಅವಕಾಶ ನೀಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಇಲ್ಲಿನ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಫೋಟೋ ಹಿಡಿದು, ಉರುಳು ಸೇವೆ, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಮಧ್ಯೆ ಕೆಲ ರೈತರು ಬಾರಿಕೋಲು ಹಿಡಿದು ಆಕ್ರೋಶ ವ್ಯಕ್ತಪಡಿಸಿ ಗೋ ಬ್ಯಾಕ್ ಅಮಿತ್ ಶಾ, ರೈತ ವಿರೋಧಿ ಕೇಂದ್ರ ಸರಕಾರಕ್ಕೆ ಧಿಕ್ಕಾರ ಕೂಗಿದರು. ಈ ವೇಳೆ ಪ್ರತಿಭಟನನಿರತ ರೈತರನ್ನು ಇಲ್ಲಿನ ಬೆಳಗಾವಿ ನಗರದ ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆ ನೇತೃತ್ವವನ್ನು ರೈತ ಮುಖಂಡರಾದ ಜಯಶ್ರೀ ಗುರನ್ನವರ, ಚೂನ್ನಪ್ಪ ಪೂಜಾರಿ, ರಾಘವೇಂದ್ರ ನಾಯಕ, ಪ್ರಕಾಶ ನಾಯಕ ಸೇರಿದಂತೆ ಇನ್ನಿತರರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News