ಜನಸಂಖ್ಯೆಗೆ ಅನುಗುನುಗುಣವಾಗಿ ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಿಸಿ: ನಾಗರಾಜ್

Update: 2021-01-17 12:33 GMT

ಚಿಕ್ಕಮಗಳೂರು, ಜ.17: ಮೀಸಲಾತಿ ಸೌಲಭ್ಯದ ಕೊರತೆಯಿಂದಾಗಿ ಒಕ್ಕಲಿಗ ಸಮುದಾಯದ ಯುವಜನತೆಗೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಸಮುದಾಯದ ಶೈಕ್ಷಣಿಕೆ ಸಾಧನೆಯ ಹಿನ್ನೆಲೆಯಲ್ಲಿ ಒಕ್ಕಲಿಗರ ಜನಸಂಖ್ಯೆಗೆ ಅನುಗುಣವಾಗಿ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ನಾಗರಾಜ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.17ರಷ್ಟು ಒಕ್ಕಲಿಗ ಸಮುದಾಯದವರಾಗಿದ್ದಾರೆ. ಸರಕಾರ ಒಕ್ಕಲಿಗರಿಗೆ ನೀಡುತ್ತಿರುವ ಶೇ.4 ಮೀಸಲಾತಿಯನ್ನು ಬೇರೆ ಜಾತಿಗಳು ಹಂಚಿಕೊಂಡಿದ್ದು, ಒಕ್ಕಲಿಗರಿಗೆ ಶೇ.2.5 ಮಾತ್ರ ಮೀಸಲಾತಿ ದೊರಕುತ್ತಿದೆ. ಈ ಪ್ರಮಾಣದ ಮೀಸಲಾತಿಯಿಂದಾಗಿ ಸಮುದಾಯದ ಯುವಜನತೆಯ ಉನ್ನತ ಶಿಕ್ಷಣದ ಕನಸಿನ ಸಾಕಾರ ಕಷ್ಟವಾಗುತ್ತಿದ್ದು, ಸಮುದಾಯದ ಮೀಸಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಈ ಹೋರಾಟಕ್ಕೆ ಸಮ್ಮತಿ ನೀಡಿದ್ದಾರೆ. ಹೋರಾಟದ ಹಿನ್ನೆಲೆಯಲ್ಲಿ ಮೈಸೂರು, ಹಾಸನ, ತುಮಕೂರು, ಬೆಂಗಳೂರಿನಲ್ಲಿ ಸಮಿತಿಯ ಜಿಲ್ಲಾ ಘಟಕಗಳನ್ನು ಸ್ಥಾಪಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಸಮುದಾಯದ ಸಮಾವೇಶವನ್ನು ಶೀಘ್ರ ನಡೆಸಲಾಗುವುದು ಎಂದರು.

ಲೇಖಕ ಎಲ್.ಎನ್.ಮುಕುಂದರಾಜ್ ಮಾತನಾಡಿ, ಒಕ್ಕಲಿಗರು ಬಹುತೇಕ ಕೃಷಿಕರಾಗಿದ್ದಾರೆ. ನಾಡಿಗೆ ಅವರ ಕೊಡುಗೆ ಅಪಾರ. 25 ವರ್ಷಗಳ ಹಿಂದೆ ಶಾಸಕರಾಗಿದ್ದ ಎಂ.ಡಿ.ನಂಜುಂಡಸ್ವಾಮಿ ಅವರು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವಂತೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಕಾರಣಾಂತರದಿಂದ ಸರಕಾರಗಳು ಇದನ್ನು ಮಾನ್ಯ ಮಾಡಿರಲಿಲ್ಲ. ಇಂದಿನ ಸರಕಾರವಾದರೂ ಈ ಸಂಬಂಧ ಅಗತ್ಯ ಕ್ರಮ ವಹಿಸಬೇಕೆಂದರು.

ಸಮಿತಿ ಸಂಚಾಲಕ ಧರ್ಮರಾಜ್ ಕಡಗ ಮಾತನಾಡಿ, ಒಕ್ಕಲಿಗರಿಗೆ ಮೀಸಲಾತಿ ಒದಗಿಸಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿನ ಸಮುದಾಯದ ಮುಖಂಡರು ಮುಂದಾಗಬೇಕು. ಸಮಿತಿ ವತಿಯಿಂದ ಪ್ರತೀ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಹೋರಾಟಗಳನ್ನು ಸಂಘಟಿಸಲಾಗುವುದು ಎಂದರು.

ಕನ್ನಡ ಸೇನೆ ಜಿಲ್ಲಾಘಟಕದ ಅಧ್ಯಕ್ಷ ಪಿ.ಸಿ.ರಾಜೇಗೌಡ, ಒಕ್ಕಲಿಗರ ಮೀಸಲಾತಿ ಹೋರಾಟ ಸಮುದಾಯದ ಮುಖಂಡರಾದ ರಾಜೇಗೌಡ, ಆನಂದ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News