ಬಿಜೆಪಿ ಪಕ್ಷದವರಿಗೆ ಪ್ರಾದೇಶಿಕತೆಯ ಬಗ್ಗೆ ಗೌರವವಿಲ್ಲ: ಡಿ.ಕೆ.ಶಿವಕುಮಾರ್

Update: 2021-01-17 12:41 GMT

ತುಮಕೂರು.ಜ.17:ಬಿಜೆಪಿ ಪಕ್ಷದ ಮುಖಂಡರಿಗೆ, ಪ್ರಾದೇಶಿಕತೆಯ ಕುರಿತು ಗೌರವವಿಲ್ಲ, ಒಕ್ಕೂಟ ವ್ಯವಸ್ಥೆಯ ಬಗ್ಗೆ ಯಾವುದೇ ಬದ್ದತೆಯಿಲ್ಲ ಭದ್ರಾವತಿಯ ಶಂಕುಸ್ಥಾಪನಾ ಸಮಾರಂಭದಲ್ಲಿ ಸಾಬೀತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಖಾಸಗಿ ಭೇಟಿಗಾಗಿ ಸಿದ್ದಗಂಗಾ ಮಠಕ್ಕೆ ಆಗಮಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಾತೃಭಾಷೆಯಲ್ಲಿಯೇ ಭಾಷಣ ಆರಂಭಿಸುವ ಬಿಜೆಪಿ ಮುಖಂಡರು, ಭದ್ರಾವತಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮ ಸಂಪೂರ್ಣ ಹಿಂದಿಮಯವಾಗಿರುವುದನ್ನು ನೋಡಿದರೆ, ಕನ್ನಡಿಗರ ಬಗ್ಗೆ ಇವರಿಗೆ ಇರುವ ಅಸಡ್ಡೆ, ನಿರ್ಲಕ್ಷ ಮನೋಭಾವನೆ ಎಂತದ್ದು ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ. ಶಂಕುಸ್ಥಾಪನಾ ನಾಮಫಲಕದಲ್ಲಿ ಕನ್ನಡ ಭಾಷೆ ಮರೆಯಾಗಿರುವ ಬಗ್ಗೆ ಇದುವರೆಗೂ 25 ಸಂಸದರಲ್ಲಿ ಒಬ್ಬರೂ ಮಾತನಾಡದಿರುವುದು ಈ ನಾಡಿಗೆ ಬಗೆದ ದ್ರೋಹ ಎಂದರು.

ರೈತರು ಈ ದೇಶದ ಬೆನ್ನೆಲುಬು. ಕಳೆದ 50ಕ್ಕೂ ಹೆಚ್ಚು ದಿನಗಳಿಂದ ದೆಹಲಿಯಲ್ಲಿ ತಮ್ಮ ಕುಟುಂಬ ಸಮೇತ ಹೋರಾಟದಲ್ಲಿ ನಿರತರಾಗಿದ್ದಾರೆ. ರೈತರ ಪಾಲಿಗೆ ಮರಣ ಶಾಸನವಾಗಿರುವ ಕೃಷಿಗೆ ಸಂಬಂಧಿಸಿದ ಮೂರು ಶಾಸನಗಳನ್ನು ಹಿಂಪಡೆಯಬೇಕೆಂಬುದು ಅವರ ಹೋರಾಟವಾಗಿದೆ. ಕಾಂಗ್ರೆಸ್ ಪಕ್ಷ ರೈತರ ಹೋರಾಟದ ಪರವಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 20 ರಂದು ರೈತರಿಗೆ ನೈತಿಕ ಬೆಂಬಲ ಘೋಷಿಸಿ, ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ರಾಜಭವನಕ್ಕೆ ತೆರಳಲಿದ್ದೇವೆ. ರಾಜ್ಯದ ಎಲ್ಲಾ ಕಡೆಗಳಿಂದಲೂ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಆಗಮಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜ್ಯದಲ್ಲಿ ಆಡಳಿತ ತೀರ ಕುಸಿದಿದೆ. ಸಾರ್ವಜನಿಕ ಹಿತ ಕಾಯುವ ಯಾವುದೇ ಅಜೆಂಡಾ ಸರಕಾರದ ಮುಂದಿಲ್ಲ. ತಮ್ಮ ವಯುಕ್ತಿಕ ಲಾಭಕೋಸ್ಕರವೇ ಹಲವಾರು ಹಿಡನ್ ಅಜೆಂಡಾಗಳನ್ನು ಜಾರಿಗೆ ತರುತ್ತಿದ್ದಾರೆ. ಬಿಜೆಪಿ ಪಕ್ಷದ ಈ ನಡೆವಳಿಕೆಗೆ ಜನ ತಕ್ಕ ಉತ್ತರವನ್ನು ಸೂಕ್ತ ಸಮಯದಲ್ಲಿ ನೀಡಲಿದ್ದಾರೆ. 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಡಿ.ಕೆ.ಶಿ ಮನೆಯ ಶುಭ ಕಾರ್ಯದ ನಿಮಿತ್ತ ಸ್ವಾಮೀಜಿಯವರನ್ನು ಭೇಟಿಯಾಗಲು ಬಂದಿದ್ದು, ಇದೊಂದು ಖಾಸಗಿ ಭೇಟಿ ಎಂದರು.

ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು,ತಮ್ಮ ಸ್ವಕ್ಷೇತ್ರದ ಜನತೆ ತಮ್ಮ ಗ್ರಾಮದ ಕೆರೆಗೆ ಹೇಮಾವತಿ ನೀರು ಹರಿಸುವಂತೆ ಮನವಿ ಮಾಡಿದವರ ಮೇಲೆ ಹರಿಹಾಯ್ದಿರುವುದು ಸರಿಯಾದ ನಡೆ ಅಲ್ಲ. ಈ ಹಿಂದೆಯೂ ಹಲವು ಬಾರಿ ಇವರ ನಡೆವಳಿಕೆಗೆ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಕೋಲಾರದಲ್ಲಿ ಪ್ರಶ್ನೆ ಕೇಳಿದ ರೈತ ಮಹಿಳೆಯ ಮೇಲೆ ಹಲ್ಲೆಗೆ ಮುಂದಾಗಿದ್ದ ಪ್ರಕರಣ, ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಇಡೀ ನಾಡೇ ನೋಡಿದೆ. ಈಗ ತಮಗೆ ಮತ ನೀಡಿದ ಜನರ ವಿರುದ್ದವೇ ಈ ರೀತಿ ಮಾತನಾಡಿರುವುದು ಸರಿಯಲ್ಲ. ಒರ್ವ ಕಾನೂನು ಮಂತ್ರಿಯಾಗಿ ವ್ಯಕ್ತಿ ಗೌರವ ಕಾಪಾಡಬೇಕಾದ ಇವರೇ ಈ ರೀತಿ ನಡೆದುಕೊಂಡರೇ ಹೇಗೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಮುರಳೀಧರ ಹಾಲಪ್ಪ ಪ್ರಶ್ನಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಕೆಂಚಮಾರಯ್ಯ, ಮುಖಂಡರಾದ ಮರಿಚನ್ನಮ್ಮ,ನಟರಾಜು, ಗೀತ ಸೇರಿದಂತೆ ಹಲವರು ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News