ಗೋಹತ್ಯೆ ನಿಷೇಧಕ್ಕೂ ಮುನ್ನ ರಫ್ತು ನಿಲ್ಲಿಸಲಿ: ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ ಡಾ.ಜಿ. ಪರಮೇಶ್ವರ್

Update: 2021-01-17 12:50 GMT

ಶಿವಮೊಗ್ಗ: ರಾಜ್ಯದಲ್ಲಿ ಗೋಹತ್ಯೆ ನಿಷೇಧಕ್ಕೂ ಮುನ್ನ ರಫ್ತು ನಿಲ್ಲಿಸಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ನಗರದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಹತ್ಯೆ ನಿಷೇಧಕ್ಕೆ ಬಿಜೆಪಿ ನೇತೃತ್ವದ ಸರಕಾರ ಕಾನೂನು ಜಾರಿಗೆ ತಂದಿದೆ. ವಾಸ್ತವದಲ್ಲಿ ಗೋಮಾಂಸ ರಫ್ತು ಮಾಡುವುದರಲ್ಲಿ ರಾಷ್ಟ್ರ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಇದರಿಂದ 26 ಸಾವಿರ ಕೋಟಿ ರೂ. ತೆರಿಗೆ ಹಣ ಬರುತ್ತಿದೆ. ಬದ್ಧತೆ ಇದ್ದಲ್ಲಿ ಸರಕಾರ ರಫ್ತನ್ನು ನಿಲ್ಲಿಸಲಿ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡರದ್ದೇ ಗೋಮಾಂಸ ರಫ್ತು ಏಜೆನ್ಸಿಗಳಿವೆ. ಮೊದಲು ಅವುಗಳನ್ನು  ನಿಷೇಧಿಸಲಿ ಎಂದು ಪರಮೇಶ್ವರ್ ಸವಾಲು ಹಾಕಿದರು.

ಭದ್ರಾವತಿಯಲ್ಲಿ ಅಮಿತ್ ಶಾ ಅವರು ಶಿಲಾನ್ಯಾಸ ನೆರವೇರಿಸಿರುವ ಆರ್‌ಎಎಫ್ ಘಟಕ ಕಾಂಗ್ರೆಸ್ ಕೊಡುಗೆಯೇ ವಿನಃ ಬಿಜೆಪಿಯದ್ದಲ್ಲ. 2019ರಲ್ಲೇ ಇದಕ್ಕೆ ಕಾಂಗ್ರೆಸ್ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಹೇಳಿದರು.

ರ‍್ಯಾಪಿಡ್ ಆಕ್ಷನ್ ಫೋರ್ಸ್ ಸ್ಥಾಪನೆಯ ಬಗ್ಗೆ ಕಾಂಗ್ರೆಸ್ ಅವಧಿಯಲ್ಲಿ ನೀಡಲಾದ ಅನುಮೋದನೆಯ ಆದೇಶ ಪ್ರತಿಯನ್ನು ಬಿಡುಗಡೆ ಮಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡಿಲ್ಲ ಎನಿಸುತ್ತದೆ. ಅದಕ್ಕಾಗಿಯೇ ಅದು ಬಿಜೆಪಿ ಅವಧಿಯಲ್ಲಿ ಮಾಡಿರುವುದಾಗಿ ಹೇಳಿದ್ದಾರೆ ಎಂದು ಲೇವಡಿ ಮಾಡಿದರು.

20ರಂದು ರಾಜ್ಯಪಾಲರ ಭೇಟಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳನ್ನು ಕೂಡಲೇ ಹಿಂಪಡೆಯಬೇಕು. ಈ ಬಗ್ಗೆ ಈಗಾಗಲೇ ರೈತರು ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ಬೆಂಬಲಿಸಿ ಜ.20ರಂದು ರಾಜ ಭವನಕ್ಕೆ ಭೇಟಿ ನೀಡಿ ಈ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕಾಯ್ದೆಗಳು ರೈತರಿಗೆ ಪೂರಕವೆಂದು ಬರೀ ಬಾಯಿ ಮಾತಿನಲ್ಲಿ ಹೇಳಲಾಗುತ್ತಿದೆ. ಆದರೆ, ಕಾಯ್ದೆಯಲ್ಲಿ ಅಂತಹ ಅಂಶಗಳನ್ನು ಉಲ್ಲೇಖಿಸಿಲ್ಲ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಭದ್ರತೆ ನೀಡುವುದಾಗಿ ಕೇಂದ್ರ ಹೇಳುತ್ತಿದೆ. ಇದು ನಿಜವಾದರೆ, ಕಾಯ್ದೆಯಲ್ಲಿ ಹೇಳಬೇಕಿತ್ತು. ವಾಸ್ತವದಲ್ಲಿ ಈ ಕಾಯ್ದೆಗಳ ಮೂಲಕ ಕಾರ್ಪೋರೇಟ್ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಹುನ್ನಾರವಿದೆ ಎಂದು ಆರೋಪಿಸಿದರು.

ತೈಲ ಬೆಲೆ ಏರಿಕೆ ವಿರುದ್ಧ ಗರಂ: ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರ ಏರಿಕೆ ಮಾಡಲಾಗುತ್ತಿದೆ. ಯುಪಿಎ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ 72.89 ಡಾಲರ್ ಇತ್ತು. ಆಗ ಪೆಟ್ರೋಲ್ 48 ರೂ. ಮತ್ತು ಡೀಸೆಲ್ 38 ರೂ. ಇತ್ತು. ಈಗ ಕಚ್ಚಾ ತೈಲದ ಬೆಲೆ 52 ಡಾಲರ್ ಇದೆ. ಆದರೆ, ಪೆಟ್ರೋಲ್ 89.90 ರೂ. ಹಾಗೂ ಡೀಸೆಲ್ 84 ರೂ. ಇದೆ. ಬೇರೆಯ ರಾಷ್ಟ್ರಗಳಲ್ಲಿ ಇಲ್ಲದಷ್ಟು ತೆರಿಗೆಯನ್ನು ಇದರ ಮೇಲೆ ಹೇರಲಾಗುತ್ತಿದೆ. ಪರಿಣಾಮ ಜನಸಾಮಾನ್ಯರು ಕಷ್ಟ ಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೂ ಸುಧಾರಣೆ ಕಾಯಿದೆ ಮೂಲಕ ಕಾರ್ಪೋರೇಟರ್ ಕಂಪೆನಿಗಳಿಗೆ ಉದ್ಧಾರ ಮಾಡಲು ಹೊರಟಿದ್ದಾರೆ. ಶೇ.85ರಷ್ಟು ಸಣ್ಣ ಹಿಡುವಳಿದಾರರೇ ಇರುವ ನಮ್ಮಲ್ಲಿ ಈ ಕಾಯ್ದೆಯಿಂದ ಯಾರಿಗೆ ಪ್ರಯೋಜನ ಆಗಲಿದೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್,ಶಾಸಕ ಬಿ.ಕೆ ಸಂಗಮೇಶ್ವರ್,ವಿಧಾನ ಪರಿಷತ್ ಸದಸ್ಯ ಅರ್.ಪ್ರಸನ್ನ ಕುಮಾರ್,ಕಾಂಗ್ರೆಸ್ ವಕ್ತಾರರಾದ ಕಿಮ್ಮನೆ ರತ್ನಾಕರ್, ಕೆ.ಬಿ ಪ್ರಸನ್ನ ಕುಮಾರ್,ಮುಖಂಡರಾದ ಎಸ್.ರವಿಕುಮಾರ್ ಮತ್ತಿತರರು ಇದ್ದರು.

"ಸರಕಾರ ಶ್ವೇತ ಪತ್ರ ಹೊರಡಿಸಲಿ"

ರಾಜ್ಯ ಸರಕಾರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎನ್ನುವುದು ನಮ್ಮ ಅನುಮಾನ. ಹೀಗಾಗಿ, ಕೂಡಲೇ ಶ್ವೇತ ಪತ್ರ ಹೊರಡಿಸುವ ಮೂಲಕ ಸರಕಾರದ ಆರ್ಥಿಕ ಸ್ಥಿತಿ ಬಗ್ಗೆ ಪಾರದರ್ಶಕತೆ ತೋರ್ಪಡಿಸಬೇಕು ಎಂದು ಜಿ.ಪರಮೇಶ್ವರ್ ಆಗ್ರಹಿಸಿದರು. 

ಹಲವು ಯೋಜನೆಗಳಿಗೆ ಸರಕಾರದಿಂದ ಸರಿಯಾಗಿ ಅನುದಾನ ನೀಡುತ್ತಿಲ್ಲ. ಎತ್ತಿನಹೊಳೆ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಇರುವ ಯೋಜನೆಗಳಿಗೆ ಸಮಪರ್ಕ ಅನುದಾನ ನೀಡಿಲ್ಲ. ಇವೆಲ್ಲ ಅಂಶಗಳು ನಮ್ಮ ಅನುಮಾನವನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News