ಐಎಂಎ ಸಕ್ಷಮ ಪ್ರಾಧಿಕಾರಕ್ಕೆ ಅಧಿಕಾರಿಗಳ ನೇಮಕ: ಹೈಕೋರ್ಟ್‍ಗೆ ಮಾಹಿತಿ

Update: 2021-01-17 13:53 GMT

ಬೆಂಗಳೂರು, ಜ.17: ಐ ಮಾನಿಟರಿ ಅಡ್ವೈಸರಿ(ಐಎಂಎ) ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ನೇಮಕ ಮಾಡಿರುವ ಸಕ್ಷಮ ತನಿಖಾ ಪ್ರಾಧಿಕಾರದಲ್ಲಿ ಖಾಲಿಯಿದ್ದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

ಇಮ್ರಾನ್ ಪಾಷ ಸೇರಿ ಹಲವರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಪಿ. ಹೇಮಲತಾ ಅವರು ಹೈಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿ ಈ ಮಾಹಿತಿ ನೀಡಿದರು.

ಐಎಂಎ ಸಕ್ಷಮ ಪ್ರಾಧಿಕಾರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಆ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡುವ ಮುನ್ನ ಅವರ ಪೂರ್ವಾಪರ ಮತ್ತು ಕಾರ್ಯದಕ್ಷತೆ ಪರಿಶೀಲಿಸಬೇಕು ಎಂದು ಸರಕಾರಕ್ಕೆ ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಪೀಠವು ನಿರ್ದೇಶಿಸಿತ್ತು. ಈ ನಿರ್ದೇಶನ ಅನುಪಾಲನೆಗೆ ಸಂಬಂಧಿಸಿದಂತೆ ಹೇಮಲತಾ ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಸದ್ಯ ನೇಮಕಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿ ಪೂರ್ವಾಪರ ಹಾಗೂ ಕಾರ್ಯದಕ್ಷತೆ ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಕಗೊಳಿಸಿದ ಎಲ್ಲಾ ಆಡಳಿತ ಇಲಾಖೆಗಳು ಲಿಖಿತವಾಗಿ ಸ್ಪಷ್ಟಪಡಿಸಿವೆ. ಅಲ್ಲದೆ, ಭವಿಷ್ಯದಲ್ಲಿ ಈ ಸಕ್ಷಮ ಪ್ರಾಧಿಕಾರದ ಹುದ್ದೆಗಳಿಗೆ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನೇಮಿಸುವ ಮುನ್ನ ಅವರ ಪೂರ್ವಾಪರ ಮತ್ತು ಕಾರ್ಯದಕ್ಷತೆ ಪರಿಶೀಲಿಸಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ಭರವಸೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News