ಸುರೇಶ್ ಅಂಗಡಿ ನಿವಾಸಕ್ಕೆ ಅಮಿತ್ ಶಾ ಭೇಟಿ

Update: 2021-01-17 14:17 GMT

ಬೆಳಗಾವಿ, ಜ.17: ಇಲ್ಲಿನ ವಿಶ್ವೇಶ್ವರನಗರದ ಸಂಪಿಗೆ ರಸ್ತೆಯಲ್ಲಿರುವ ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿಯವರ ನಿವಾಸ ‘ಸ್ಫೂರ್ತಿ'ಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರವಿವಾರ ಅಂಗಡಿಯವರ ಭಾವಚಿತ್ರಕ್ಕೆ ನಮನಗಳನ್ನು ಅರ್ಪಿಸಿದರು.

ಸುರೇಶ ಅಂಗಡಿಯವರು ಉತ್ತಮ ವ್ಯಕ್ತಿತ್ವ ಹೊಂದಿದ್ದರು. ಅವರು ಕೋವಿಡ್-19 ಸೋಂಕಿನಿಂದ ಬಳಲುತ್ತಿರುವಾಗ ತಾವೂ ಅದೇ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದನ್ನು ನೆನಪಿಸಿಕೊಂಡ ಅವರು, ಅಂಗಡಿ ಅವರ ನಿಧನ ದೊಡ್ಡನಷ್ಟ ಉಂಟುಮಾಡಿದೆ ಎಂದು ಅಮಿತ್ ಶಾ ಇದೇ ವೇಳೆ ಸಂತಾಪ ವ್ಯಕ್ತಪಡಿಸಿದರು.

ಸುರೇಶ ಅಂಗಡಿಯವರ ಧರ್ಮಪತ್ನಿ ಮಂಗಲ್ ಅಂಗಡಿ, ಪುತ್ರಿಯರಾದ ಸ್ಫೂರ್ತಿ, ಶ್ರದ್ಧಾ, ಅಳಿಯಂದಿರಾದ ಡಾ.ರಾಹುಲ್ ಪಾಟೀಲ, ಸಂಕಲ್ಪ ಶೆಟ್ಟರ್, ಕಿರಿಯ ಸಹೋದರ ಮೋಹನ ಚ.ಅಂಗಡಿಯವರಿಗೆ ಸಾಂತ್ವನ ಹೇಳಿ, ದುಃಖ ಸಹಿಸಿಕೊಳ್ಳುವ ಶಕ್ತಿ ಬರಲೆಂದು ತೀವ್ರ ಶೋಕ ವ್ಯಕ್ತಪಡಿಸಿದರು.

ಕುಟುಂಬ ವರ್ಗದ ಸದಸ್ಯರಿಗೆ ಮಾತ್ರ ಅವಕಾಶ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಹಿನ್ನೆಲೆಯಲ್ಲಿ ಸುರೇಶ ಅಂಗಡಿ ಅವರ ನಿವಾಸಕ್ಕೆ ತಲುಪುವ ಎಲ್ಲಾ ಮಾರ್ಗಗಳಲ್ಲಿ ತೀವ್ರ ಬಿಗಿ, ಭದ್ರತೆ ಕಲ್ಪಿಸಲಾಗಿತ್ತು. ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆಹಾರ ಸುರಕ್ಷತಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಉಪಹಾರ ಸಿದ್ಧಪಡಿಸಲಾಗಿತ್ತು.

ಸುರೇಶ ಅಂಗಡಿಯವರ ಆಪ್ತ ಸಿಬ್ಬಂದಿ ವರ್ಗದ ರಾಜು ಜೋಷಿ, ಶ್ರೀಕಾಂತ ಕಡಕೋಳ, ಸಂತೋಷ ತುಬಚಿ, ಶಿವಲಿಂಗಯ್ಯ ಅಲ್ಲಯ್ಯನವರಮಠ ಮತ್ತಿತರ ಕೆಲವೇ ಜನರಿಗೆ ಭೇಟಿ ಸಂದರ್ಭದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ದಿ.ಸುರೇಶ ಅಂಗಡಿಯವರ ತಾಯಿ ಸೋಮವ್ವ ಚನ್ನಬಸಪ್ಪ ಅಂಗಡಿಯವರು ನಾಗೇರಹಾಳದ (ಕೊಂಡಸಕೊಪ್ಪ) ನಿವಾಸದಲ್ಲಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ, ಬೃಹತ್, ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಶಾಸಕ ಅನಿಲ ಬೆನಕೆ, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News