"ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಬಿಜೆಪಿಯ ಶೇ.75ಕ್ಕೂ ಹೆಚ್ಚು ಸದಸ್ಯರನ್ನು ಗೆಲ್ಲಿಸಬೇಕು"

Update: 2021-01-17 14:11 GMT
File Photo

ಬೆಳಗಾವಿ, 17: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾದ ರೀತಿಯಲ್ಲೇ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ಬಿಜೆಪಿಯ ಶೇ.75ಕ್ಕೂ ಹೆಚ್ಚು ಸದಸ್ಯರನ್ನು ಚುನಾಯಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದಿಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಏರ್ಪಡಿಸಿದ್ದ ಜನಸೇವಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಗ್ರಾ.ಪಂ.ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಬಿಜೆಪಿ ಬೆಂಬಲಿಸಿದ ಗ್ರಾಮೀಣ ಪ್ರದೇಶದ ಜನರನ್ನು ಅಭಿನಂದಿಸುವೆ ಎಂದರು.

ಪ್ರಧಾನಿ ಮೋದಿ ಹಾಗೂ ನಾನು ಕರ್ನಾಟಕ ರಾಜ್ಯಕ್ಕೆ ಬಂದಾಗಗೆಲ್ಲಾ ಇಲ್ಲಿನ ಜನತೆ ನಮಗೆ ಅಗಾದವಾದ ಪ್ರೀತಿಯನ್ನು ನೀಡಿದ್ದೀರಿ. ಹೀಗಾಗಿ ಬಹುಮತ ಪಡೆದು ಸ್ವತಂತ್ರ ಸರಕಾರ ರಚನೆಯಾಗಿದೆ. ನಮ್ಮ ಬಗ್ಗೆ ಕಾಂಗ್ರೆಸ್‍ನವರು ಏನೇ ಮಾತನಾಡಿದರೂ ಎರಡನೇ ಬಾರಿಗೂ ಬಹುಮತ ಸಿಕ್ಕಿದೆ ಎಂದು ಬಿಎಸ್‍ವೈ ಸರಕಾರವನ್ನು ಅಮಿತ್ ಶಾ ಸಮರ್ಥಿಸಿದರು.

ಬಿಎಸ್‍ವೈ ಆಡಳಿತಕ್ಕೆ ಮೆಚ್ಚುಗೆ: ಕೊರೋನ ಸಂಕಷ್ಟದ ಸಂದರ್ಭದಲ್ಲಿಯೂ ಸಿಎಂ ಬಿಎಸ್‍ವೈ  ನೇತೃತ್ವದ ರಾಜ್ಯ ಸರಕಾರ ಹಲವು ಸಮುದಾಯಗಳಿಗೆ ನೆರವು ನೀಡಿದೆ. ಕೋವಿಡ್-19 ಸೋಂಕಿನ ಪರಿಸ್ಥಿತಿಯನ್ನು ಸರಕಾರ ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ ಎಂದು ಅಮಿತ್ ಶಾ, ಯಡಿಯೂರಪ್ಪ ಸರಕಾರದ ಕಾರ್ಯವೈಖರಿಯನ್ನು ಕೊಂಡಾಡಿದರು.

2ಲಕ್ಷ ಕೋಟಿ ರೂ.ಗೂ ಅಧಿಕ ಅನುದಾನ ನೀಡಿದ್ದೇವೆ: ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸಿದ ಮನಮೋಹನ್ ಸಿಂಗ್ ಸರಕಾರ ಕರ್ನಾಟಕ ರಾಜ್ಯಕ್ಕೆ ಏನು ಕೊಟ್ಟಿತ್ತು ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ ಅಮಿತ್ ಶಾ, ನಮ್ಮ ಸರಕಾರ ಕರ್ನಾಟಕಕ್ಕೆ 2ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅನುದಾನ ನೀಡಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜೋಡಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ ಎಂದ ಅಮಿತ್ ಶಾ, ವಿಪಕ್ಷ ಕಾಂಗ್ರೆಸ್ ಮಾತುಗಳನ್ನು ರಾಜ್ಯದ ಜನತೆ ನಂಬಬಾರದು. ಅಭಿವೃದ್ಧಿಗಾಗಿ ಬಿಜೆಪಿ ಶ್ರಮಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ ಮಾತನಾಡಿ, ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರವನ್ನು ಗೆಲ್ಲಬೇಕು. ರಾಮ ರಾಜ್ಯದ ಕನಸು ನನಸು ಮಾಡುವ ನಿಟ್ಟಿನಲ್ಲಿ ಮಂದಿರ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ನಮ್ಮೆಲ್ಲರ ಕನಸು ನನಸಾಗಿದೆ ಎಂದರು.

ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಸುರೇಶ ಅಂಗಡಿ ಋಣ ತೀರಿಸಲು, 2.5ಲಕ್ಷ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆಂದು ಸಂಕಲ್ಪ ಮಾಡಬೇಕು ಎಂದ ಅವರು, ಯಾರೇ ಅಭ್ಯರ್ಥಿಯಾದರೂ ಪಕ್ಷ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರಮೇಶ್ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕೊರೋನ ಮಾರ್ಗಸೂಚಿ ಉಲ್ಲಂಘನೆ: ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳು ಸೇರಿದಂತೆ ಸರಕಾರದ ಸಚಿವರು ಪಾಲ್ಗೊಂಡಿದ್ದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಕೊರೋನ ಮಾರ್ಗಸೂಚಿ ಉಲ್ಲಂಘನೆ ಕಂಡುಬಂತು. ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರೂ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಅಲ್ಲದೆ, ವ್ಯಕ್ತಿಗತ ಅಂತರವು ಕಣ್ಮರೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News