ಕನಕದಾಸರನ್ನು ದಾಸ ಎಂದು ಕರೆಯುವುದು ಸರಿಯಲ್ಲ: ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ

Update: 2021-01-17 14:33 GMT

ಮೈಸೂರು,ಜ.17: ದಾಸ ಅಂದರೆ ಸೇವಕ, ಗುಲಾಮ ಎನ್ನುವ ಅರ್ಥವಿದೆ. ಕನಕರು ತಮ್ಮನ್ನು ಹರಿಯ ದಾಸ ಅಂತ ಅಂದುಕೊಂಡಿರಬಹುದು. ಆದರೆ, ನಾವು ಅವರಿಗೆ ದಾಸ ಅಂತ ಬಳಸುವುದು ಅಪಮಾನ ಮಾಡಿದಂತೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮೈಸೂರು ವಿವಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ರವಿವಾರ “ಕನಕದಾಸರ 533ನೇ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ದೀಪ ಬೆಳಗುವ ಮೂಲಕ  ಚಾಲನೆ ನೀಡಿದರು.

ಈ ಸಂದರ್ಭ ಪ್ರೊ.ಆರವಿಂದ ಮಾಲಗತ್ತಿ ಅವರು ಮಾತನಾಡಿ, ದಾಸತ್ವವ ಮೀರಿದ ವ್ಯಕ್ತಿತ್ವ ಕನಕರಿಗೆ ಇದೆ. ತಿಮ್ಮಪ್ಪ ಕನಕನಾಗಿ, ಕನಕ ದಾಸರಾಗಿ, ತ್ರಿವಿಕ್ರಮ ದಾಸನಾಗಿ ಬದಲಾಗಿದ್ದಾರೆ. ಕನಕರು ದಾಸ ಎನ್ನುವ ಪದದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಕೂಳ ದಾಸ, ಮೂಳ ದಾಸ, ಮಾದಿಗ ದಾಸ, ಹೊಲೆಯ ದಾಸ ಅಂತ ಕೀರ್ತನೆಗಳಲ್ಲಿ ಬರೆದಿದ್ದಾರೆ ಎಂದು ಹೇಳಿದರು.

ನಿಂದಿಸುವ ಪದಗಳನ್ನು ಸ್ವಾಭಿಮಾನದ ಪದಗಳಾಗಿ ಕಾವ್ಯದಲ್ಲಿ ಬಳಸುತ್ತಿದ್ದರು ಅನ್ನಿಸುತ್ತೆ. ದಾಸ ಅನ್ನುವ ಪದ ಬಳಕೆ ಸಮರ್ಥನೀಯ ಅಲ್ಲ ಅನ್ನಿಸುತ್ತೆ. ಕನಕದಾಸರನ್ನು ದಾಸ ಅಂತ ಕರೆಯುವುದು ಬೇಡ. ಕನಕವ್ಯಾಸರು ಅಂತ ಬಳಸಿದರೆ ಸೂಕ್ತ ಅನ್ನಿಸುತ್ತೆ. ವ್ಯಾಸ ಅಂದರೆ ವಿಸ್ತೃತವಾದದ್ದು ಅಂತ ಅರ್ಥ. ಅದಾಗ್ಯೂ ಕನಕವ್ಯಾಸ ಅಂತ ಬಳಸುವುದು ಸರಿಯಲ್ಲ ಅನ್ನಿಸಿದರೆ ಕನಕರು ಅಂತ ಸಂಬೋಧಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

"ಸಿದ್ದರಾಮಯ್ಯ ಅವರಿಗೆ ಗಂಡೆದೆಯ ಗುಂಡಿಗೆ ಇದೆ"
ಸಿದ್ದರಾಮಯ್ಯರಿಗೆ ಗಂಡೆದೆಯ ಗುಂಡಿಗೆ ಇದೆ. ನಾನು ಬೇಕಾದರೆ ಗೋಮಾಂಸ ತಿನ್ನುತ್ತೇನೆ ಎನ್ನುವ ಧೈರ್ಯ ಎಲ್ಲರಿಗೂ ಬರುವುದಿಲ್ಲ. ಕನಕದಾಸರ ಕೀರ್ತನೆಯೊಂದರಲ್ಲಿ ಕೃಷ್ಣ ಹಸುವನ್ನ ಕೊಂದ, ಕರುವನ್ನು ಕೊಂದ ಅನ್ನೋ ಮಾತಿದೆ. ರಾಕ್ಷಸನೊಬ್ಬ ಹಸುವಿನ ರೂಪದಲ್ಲಿ ಬಂದಿದ್ದಕ್ಕೆ ಕೃಷ್ಣ ಹಸುವನ್ನ ಕೊಂದಿದ್ದಾನೆ ಅಂತ ಬರೆದಿದ್ದಾರೆ. ಆದರೆ, ಅವರ ಕೀರ್ತನೆಯಲ್ಲಿ ಕಾರಣ ಕೊಟ್ಟಿಲ್ಲ ಎಂದರು.

ಹಸುವಿನಲ್ಲಿ ದೇವರಿದೆ ಎಂದು ಹೇಳುತ್ತಾರೆ. ಹಾಗಿದ್ದಲ್ಲಿ, ಹಸುವಿನ ರೂಪದಲ್ಲಿ ರಾಕ್ಷಸ ಬರಲು ಸಾಧ್ಯವೇ?, ಹಾಗೇ ಬಂದಿದ್ದರೆ ಆ ಹಸುವನ್ನು ಯಾಕೆ ಕೃಷ್ಣ ಕೊಲ್ಲಬೇಕಿತ್ತು. ಈ ಪ್ರಶ್ನೆ ನಮಗೆ ಯಾವಾಗಲೂ ಕಾಡುತ್ತೆ. ಹಾಗಾಗಿ, ಸಿದ್ದರಾಮಯ್ಯನವರ ಹೇಳಿಕೆ ನನಗೆ ಗಂಡೆದೆಯ ಹೇಳಿಕೆ ಅಂತ ಅನ್ನಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮೈಸೂರು ವಿ.ವಿ.ನಿವೃತ್ತ ಪ್ರಾಧ್ಯಾಪಕ ಡಾ.ಸಿ.ನಾಗಣ್ಣ, ಕಾಂಗ್ರೆಸ್ ಮುಖಂಡ ಕೆ.ಮರಿಗೌಡ, ಕರಾಹಿವಗವೇ ಅಧ್ಯಕ್ಷ ಕೆ.ಎಸ್.ಶಿವರಾಮ್, ಜಟ್ಟಿ ಹುಂಡಿ ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ: ಸಿದ್ದರಾಮಯ್ಯ

ಹೆಚ್ಚು ವಿವಾದಕ್ಕೆ ಒಳಗಾದ ರಾಜಕಾರಣಿ ನಾನೇ. ಗೋಮಾಂಸ ಸೇವನೆ ಅವರವರ ಆಹಾರದ ಹಕ್ಕು. ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದಿದ್ದೆ. ಇದನ್ನು ವಿವಾದ ಮಾಡಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. 

ಒಂದು ಹಸು, ಎಮ್ಮೆ, ಎತ್ತು ಸಾಕಲು ದಿನಕ್ಕೆ 7 ಕೆಜಿ ಮೇವು ಬೇಕು. ತಿಂಗಳಿಗೆ 3 ಸಾವಿರ ಬೇಕು. ಸಾಧ್ಯವಾದಷ್ಟು ಸತ್ಯ ಹೇಳುವುದಕ್ಕೆ ಪ್ರಯತ್ನಿಸುತ್ತೇನೆ, ಹಳ್ಳಿ ಭಾಷೆಯಲ್ಲಿ ಮಾತಾಡುತ್ತೇನೆ, ಅದಕ್ಕೆ ಆರೆಸ್ಸೆಸ್ ಅವರು ನನ್ನ ಹೇಳಿಕೆಗೆ ರಂಗು, ರಂಗು ಬಣ್ಣ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. 

ಇತ್ತೀಚೆಗೆ ಹನುಮ ಹುಟ್ಟಿದ ದಿನ ಗೊತ್ತಿಲ್ಲ, ನಿಮಗೆ ಗೊತ್ತಿದ್ದರೆ ಹೇಳಿ ಎಂದಿದ್ದಕ್ಕೆ ಅದನ್ನು ವಿವಾದ ಮಾಡಿದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News