ಮೌಢ್ಯಕ್ಕೆ ಸೆಡ್ಡು: ಸ್ಮಶಾನದಲ್ಲಿಯೇ ಮಗುವಿನ ನಾಮಕರಣ

Update: 2021-01-17 17:28 GMT

ಬೆಳಗಾವಿ, ಜ.17: ಮೌಢ್ಯ ಚಟುವಟಿಕೆಗಳ ವಿರುದ್ಧ ಸದಾ ವಿಭಿನ್ನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಮಾನವ ಬಂಧುತ್ವ ವೇದಿಕೆಯೂ, ಸ್ಮಶಾನವೊಂದರಲ್ಲಿ ಮಗುವಿಗೆ ನಾಮಕರಣ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.

ರವಿವಾರ ಇಲ್ಲಿನ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಗುವಿಗೆ "ಭೀಮರಾವ್" ಎಂದು ನಾಮಕರಣ ಮಾಡುವ ಮೂಲಕ ಹಾರೈಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿ ತೀರದಿಂದ ಮತ್ತೊಬ್ಬ ಭೀಮರಾವ್ ಹೋರಾಟ ಮಾಡಲಿ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆ ಬೆಳೆಯಲಿ. ಜತೆಗೆ ಈ ದೇಶದ ಕೊಳೆ ತೊಳೆಯಲಿ ಎಂದು ನುಡಿದರು.

ವೇದಿಕೆ ಮೂಲಕ ಮೌಢ್ಯ ಆಚರಣೆ ವಿರುದ್ಧ ಈಗಾಗಲೇ ಹತ್ತು  ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರು ಜ್ಞಾನದ ಕಡೆ ಗಮನ ಹರಿಸಿದರೆ ಮಾತ್ರ ನಾವು, ಬದಲಾವಣೆ ಕಾಣಲು ಸಾಧ್ಯ. ಹಾಗಾಗಿ, ವಿದ್ಯಾವಂತರು, ಯುವಕರು ಮೌಢ್ಯ ವಿರುದ್ಧ ಆಂದೋಲನ ರೂಪಿಸಬೇಕು ಎಂದು ಅವರು ಕರೆ ನೀಡಿದರು.

ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರ ಮೊಮ್ಮಗನಿಗೆ ನಾಮಕರಣ ಮಾಡಲಾಯಿತು. ಈ ವೇಳೆ ಮಾಜಿ ಸಚಿವ ವೀರಕುಮಾರ್ ಪಾಟೀಲ್, ಮಾಜಿ ಶಾಸಕ ಕಾಕಾ ಸಾಹೇಬ್ ಪಾಟೀಲ್, ಉತ್ತಮ್ ಪಾಟೀಲ್, ವೇದಿಕೆ ಕಾರ್ಯಕರ್ತರು ಹಾಗೂ ಮಗುವಿನ ಪೋಷಕರು ಪಾಲ್ಗೊಂಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News