ರಾಷ್ಟ್ರಪಿತನನ್ನು ಯುವಜನತೆ ಅವಹೇಳನ ಮಾಡುತ್ತಿದೆ: ವೈಎಸ್‍ವಿ ದತ್ತ ವಿಷಾದ

Update: 2021-01-17 18:13 GMT

ಚಿಕ್ಕಮಗಳೂರು, ಜ.17: ಇಂದಿನ ಯುವಜನತೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿರುವುದು ಮತ್ತು ಟೀಕಿಸುತ್ತಿರುವುದು ನಮ್ಮ ವ್ಯವಸ್ಥೆಯ ಘೋರ ದುರಂತ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.

ಜಿಲ್ಲಾ ಕಸಾಪ ನಗರದ ವಿರಕ್ತ ಮಠ ಬಸವ ಮಂದಿರದಲ್ಲಿ ರವಿವಾರ ಏರ್ಪಡಿಸಿದ್ದ ದಿ.ಡಿ.ಎಸ್.ಕೃಷ್ಣಪ್ಪಗೌಡ ಮತ್ತು ದಿ.ಎ.ಎಂ.ಬಸವೇಗೌಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗಾಂಧಿ ಆರ್ಥಿಕ ಚಿಂತನೆ-ಸರ್ವೋದಯ ಸಮಾಜ ವಿಷಯ ಕುರಿತು ಅವರು ಉಪನ್ಯಾಸ ನೀಡಿದ ಅವರು, ರಾಷ್ಟ್ರಪಿತ ಜೀವಿಸಿದ್ದ 20ನೇ ಶತಮಾನವನ್ನು ಇಡೀ ವಿಶ್ವವೇ ಗಾಂಧೀಯುಗ ಎಂದು ಕರೆಯುತ್ತದೆ. ಜಗತ್ತಿನಲ್ಲಿ ಕೋಟ್ಯಂತರ ಜನ ಒಂದೇ ವ್ಯಕ್ತಿಯನ್ನು ಗೌರವಿಸಿದ್ದರೇ, ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಲಕ್ಷಾಂತರ ಬರಹ ಮತ್ತು ಪ್ರಕಟಣೆ ಕಂಡಿದ್ದರೆ, ವ್ಯಾಪಕವಾಗಿ ವಿಚಾರ ಸಂಕಿರಣಗಳು, ಚರ್ಚೆಗಳು ನಡೆದಿದ್ದರೇ, ಅದು ಮಹಾತ್ಮಾ ಗಾಂಧೀಜಿಯವರ ಬಗ್ಗೆ ಮಾತ್ರ ಎಂದರು.

ನಾವು ರಾಷ್ಟ್ರಪಿತನನ್ನು ಮರೆತಿಲ್ಲ, ಆದರೆ ಅವರ ತತ್ವ ಸಿದ್ಧಾಂತಗಳನ್ನು ಸಮಾಧಿ ಮಾಡಿದ್ದೇವೆ, ಎಲ್ಲಾ ರಸ್ತೆಗಳಿಗೂ ಅವರ ಹೆಸರಿಟ್ಟಿದ್ದೇವೆ ಆದರೆ ಅವರಂತೆ ಬದುಕುತ್ತಿಲ್ಲ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವೆ ಡಿ.ಕೆ.ತಾರಾದೇವಿ, 12ನೇ ಶತಮಾನದ ಬಸವಣ್ಣನವರ ವಚನಗಳು, ವಿಚಾರಧಾರೆಗಳು ಸಾಮಾಜಿಕ ಬದಲಾವಣೆಗೆ ಕಾರಣವಾಗಿವೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ತತ್ವ, ಸಿದ್ಧಾಂತ ಮತ್ತು ವಿಚಾರಧಾರೆಗಳು, ಭಕ್ತಿ ಭಂಡಾರಿ ಬಸವಣ್ಣನವರ ವಿಚಾರಧಾರೆಗಳು, ತತ್ವಗಳು ಒಂದೇ ಆಗಿವೆ. ಅವು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಮಸಮಾಜ-ಶರಣರ ಆರ್ಥಿಕ ಚಿಂತನೆಗಳು ವಿಷಯ ಕುರಿತು ಬಸವ ಮಂದಿರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಉಪನ್ಯಾಸ ನೀಡಿದರು.

ಹಿರೇಗೌಜ ಸರಕಾರಿ ಪ್ರೌಢಶಾಲೆಯ ಶಿಕ್ಷಕರ ಕಲಾ ಬಳಗದಿಂದ ಗೀತಗಾಯನ ಮತ್ತು ಅಕ್ಕನ ಬಳಗದಿಂದ ವಚನ ಗಾಯನ ನಡೆಯಿತು. ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಿ.ಕೆ.ಉದಯಶಂಕರ್, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಚಂದ್ರಯ್ಯ, ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ಖಜಾಂಚಿ ಪ್ರೊ.ಕೆ.ಎನ್.ಲಕ್ಷ್ಮೀಕಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News