ನೆರೆಯ ದೇಶಗಳಿಗೆ ಕೋವಿಡ್-19 ಲಸಿಕೆ ಪೂರೈಸಲು ಭಾರತ ಸಿದ್ಧತೆ

Update: 2021-01-18 04:01 GMT

ಹೊಸದಿಲ್ಲಿ, ಜ.18: ಲಸಿಕೆ ರಾಜತಾಂತ್ರಿಕತೆಯ ಭಾಗವಾಗಿ ಭಾರತ ತನ್ನ ನೆರೆಯ ದೇಶಗಳಿಗೆ ಕೋವಿಡ್-19 ಲಸಿಕೆ ಸರಬರಾಜು ಮಾಡಲು ಮುಂದಾಗಿದೆ.

ನೇಪಾಳ, ಭೂತಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಅಫ್ಘಾನಿಸ್ತಾನ, ಮಾಲ್ಡೀವ್ಸ್ ಮತ್ತು ಮಾರಿಶಸ್ ‌ಗೆ ಲಸಿಕೆ ಸರಬರಾಜು ಮಾಡುವ ಮೂಲಕ ಆ ದೇಶಗಳ ಲಸಿಕೆ ಕಾರ್ಯಕ್ರಮಕ್ಕೆ ನೆರವಾಗಲು ಭಾರತ ಯೋಚಿಸುತ್ತಿದೆ. ಸದ್ಭಾವನೆ ಪ್ರತೀಕವಾಗಿ ಮೊದಲ ಕಂತನ್ನು ಉಚಿತವಾಗಿ ವಿತರಿಸಲಿದ್ದು, ಬಳಿಕ ಸೆರಮ್ ಇನ್‌ಸ್ಟಿಟ್ಯೂಟ್ ಅಥವಾ ಭಾರತ್ ಬಯೋಟೆಕ್‌ನಿಂದ ಈ ದೇಶಗಳು ಅಗತ್ಯ ಪ್ರಮಾಣದ ಲಸಿಕೆ ಖರೀದಿಸಬೇಕಾಗುತ್ತದೆ.

ಭಾರತ ಶನಿವಾರ ದೇಶಾದ್ಯಂತ ಕೋವಿಡ್-19 ಲಸಿಕೆ ನೀಡಿಕೆ ಆರಂಭಿಸಿದ್ದು, ಮೊದಲ ದಿನ ಸುಮಾರು 1.9 ಲಕ್ಷ ಮಂದಿ ಲಸಿಕೆ ಪಡೆದಿದ್ದಾರೆ.

ನೇಪಾಳ ಈಗಾಗಲೇ ಭಾರತದಿಂದ ಕೋವಿಡ್-19 ಲಸಿಕೆಗಾಗಿ ಮನವಿ ಮಾಡಿದೆ. ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಈಗಾಗಲೇ ಸೆರಮ್ ಇನ್‌ಸ್ಟಿಟ್ಯೂಟ್ ಜತೆ ಲಸಿಕೆಗಾಗಿ ಒಪ್ಪಂದ ಮಾಡಿಕೊಂಡಿವೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಈಗಾಗಲೇ ಶ್ರೀಲಂಕಾ ನಾಯಕರಿಗೆ ಭರವಸೆ ನೀಡಿ, ದೇಶದಲ್ಲಿ ಶೀಘ್ರವೇ ಲಸಿಕೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ದೇಶಗಳು ಭಾರತದಿಂದ ಲಸಿಕೆ ಖರೀದಿಸುವಾಗ ಕೂಡಾ ಭಾರತದಲ್ಲಿ ಲಸಿಕೆಗೆ ಪಾವತಿಸುವ ದರವನ್ನೇ ಈ ದೇಶಗಳಿಗೂ ನಿಗದಿಪಡಿಸಲಾಗುವುದು ಎಂದು ಮೂಲಗಳು ಹೇಳಿವೆ. ಆದರೆ ಭಾರತ ತನ್ನ ಅಗತ್ಯತೆಗೆ ಸಾಕಷ್ಟು ಲಸಿಕೆಯನ್ನು ಹೊಂದಿದ ಬಳಿಕವೇ ರಫ್ತಿಗೆ ಅವಕಾಶ ನೀಡಲಾಗುವುದು ಎಂದು ಮೂಲಗಳು ಸ್ಪಷ್ಟಪಡಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News