ಮಹಾರಾಷ್ಟ್ರ ಸಿಎಂ ವಿರುದ್ಧ ಸಿಡಿದೆದ್ದ ಕನ್ನಡಿಗರು: ವಿವಿಧೆಡೆ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ

Update: 2021-01-18 18:07 GMT

ಬೆಂಗಳೂರು, ಜ. 18: ‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಮರಳಿ ಸೇರ್ಪಡೆ' ಮಾಡಿಕೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು, ಬೆಳಗಾವಿ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರತಿಭಟನೆ ನಡೆಸಿ, ಠಾಕ್ರೆ ಭೂತದಹನ ಮಾಡಿದ್ದಾರೆ.

ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ ಮತ್ತು ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕನ್ನಡ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದು, ಉದ್ಭವ್ ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ‘ನಮ್ಮ ನೆಲದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ' ಎಂದು ಎಚ್ಚರಿಕೆ ನೀಡಿದರು.

ರಾಜಕೀಯ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ಅಧಿಕಾರದ ಅಸ್ತಿತ್ವಕ್ಕಾಗಿ ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡುವ ಉದ್ಧವ್ ಠಾಕ್ರೆ ಹಾಗೂ ಎಂಇಎಸ್ ಕ್ರಮ ಖಂಡನೀಯ. ಇದನ್ನು ಯಾವುದೇ ಕಾರಣಕ್ಕೂ ಕನ್ನಡಿಗರು ಸಹಿಸುವುದಿಲ್ಲ. ರಾಜ್ಯ ಸರಕಾರ ಅವರ ಹೇಳಿಕೆ ವಿರುದ್ಧ ಸರ್ವಾನುಮತದ ಖಂಡನೆ ವ್ಯಕ್ತಪಡಿಸಬೇಕೆಂದು ಹೋರಾಟಗಾರರು ಆಗ್ರಹಿಸಿದರು.

ಓಲೈಕೆ ಸಲ್ಲ: ‘ಗಡಿ ವಿಷಯದಲ್ಲಿ ಪದೇ ಪದೇ ಉದ್ಧಟತನದ ಹೇಳಿಕೆ ನೀಡುವವರ ವಿರುದ್ಧ ಹೋರಾಟ ಮಾಡಲಿದ್ದು, ಬೆಳಗಾವಿಯಿಂದಲೇ ಆ ಚಳವಳಿಯನ್ನು ಆರಂಭಿಸುತ್ತೇವೆ. ರಾಜ್ಯ ಸರಕಾರಕ್ಕೆ ಕನ್ನಡದ ಬಗ್ಗೆ ಬದ್ಧತೆ ಇಲ್ಲ. ಮರಾಠಿಗರನ್ನು ಓಲೈಸಲು ಮರಾಠ ಅಭಿವೃದ್ಧಿ ನಿಗಮ ರಚನೆ ಮಾಡಿದೆ. ಈಗ ಅವರು ಮೂರು ಜಿಲ್ಲೆಗಳು ನಮಗೆ ಸೇರಬೇಕು ಎಂದು ಹೇಳುತ್ತಾರೆ. ನಾಳೆ ಕರ್ನಾಟಕ ರಾಜ್ಯವೇ ನಮ್ಮದೆಂದು ಹೇಳುತ್ತಾರೆ' ಎಂದು ಮುಖಂಡರು ಕಿಡಿಕಾರಿದರು.

‘ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸವನ್ನು ಉದ್ಧವ್ ಠಾಕ್ರೆ ಮಾಡಿದ್ದು, ಅವರಿಗೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯ ಕನ್ನಡಿಗರಿಗೆ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಕನ್ನಡಿಗರು ಅದನ್ನು ಒಪ್ಪಿ ಬದುಕುತ್ತಿದ್ದಾರೆ. ಸೌಹಾರ್ದ ಕದಡುವ ಹೇಳಿಕೆ ನೀಡುವುದು ಶೋಭೆಯಲ್ಲ' ಎಂದು ಮುಖಂಡರು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News