ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಕಡಿತ ಬೇಡ: ಸರಕಾರಕ್ಕೆ ಕುಮಾರಸ್ವಾಮಿ ಮನವಿ

Update: 2021-01-18 14:10 GMT

ಬೆಂಗಳೂರು, ಜ.18: ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್‍ಡಿ ಮತ್ತು ಎಂಫಿಲ್ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಬಾರದೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ವಿದ್ಯಾರ್ಥಿಗಳು 2017ರ ಸರಕಾರದ ಆದೇಶದಂತೆ ಜೆಆರ್‍ಎಫ್ ಮಾದರಿಯಲ್ಲಿ ತಿಂಗಳಿಗೆ 25 ಸಾವಿರ ರೂ. ಪ್ರೋತ್ಸಾಹ ಧನವನ್ನು ಮತ್ತು ವಾರ್ಷಿಕ 10 ಸಾವಿರ ರೂ.ನಿರ್ವಹಣಾ ವೆಚ್ಚವನ್ನು ಪಡೆಯುತ್ತಿದ್ದರು. ಇದರಿಂದ ವಿದ್ಯಾರ್ಥಿಗಳು ನಿರಾತಂಕದಿಂದ ಸಂಶೋಧನೆಯಲ್ಲಿ ತೊಡಗಲು ಸಾಧ್ಯವಾಗುತ್ತಿತ್ತೆಂದು ತಿಳಿಸಿದ್ದಾರೆ.

ಇತ್ತೀಚೆಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಗಳು ನ.9, 2020ರಂದು ಒಂದು ತಿದ್ದುಪಡಿಯನ್ನು ಹೊರಡಿಸಿ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಗೆ ನೀಡುತ್ತಿದ್ದ ತಿಂಗಳಿಗೆ 25 ಸಾವಿರ ರೂ.ಬದಲಾಗಿ ಪ್ರತಿ ವಿದ್ಯಾರ್ಥಿಗಳಿಗೆ ಕೇವಲ 8,333 ರೂ.ಮಾತ್ರ ನೀಡಲಾಗುತ್ತಿದೆ. ಈ ಹಿಂದೆ ನೀಡುತ್ತಿದ್ದ ನಿರ್ವಹಣಾ ವೆಚ್ಚವನ್ನು ಕೊಡಲಾಗುವುದಿಲ್ಲವೆಂದು ಆದೇಶ ಹೊರಡಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿ ವೇತನವನ್ನು ಕಡಿತ ಮಾಡಿರುವುದರಿಂದ ಆರ್ಥಿಕವಾಗಿ ತೀರ ಹಿಂದುಳಿದ ಅಲ್ಪಸಂಖ್ಯಾತರ ಸಂಶೋಧನಾರ್ಥಿಗಳಿಗೆ ಆತಂಕವನ್ನು ಉಂಟು ಮಾಡಿದೆ. ಹೀಗಾಗಿ ರಾಜ್ಯ ಸರಕಾರ ವಿದ್ಯಾರ್ಥಿ ವೇತನದಲ್ಲಿ ಕಡಿತ ಮಾಡದೆ ವಿದ್ಯಾರ್ಥಿಗಳ ಸಂಶೋಧನೆಗೆ ಹೆಚ್ಚಿನ ಅವಕಾಶ ಮಾಡಿಕೊಡಬೇಕೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News