ಗೋಹತ್ಯೆ ನಿಷೇಧ ಕಾಯ್ದೆ: ನಿಯಮಗಳ ಕುರಿತು ಸ್ಪಷ್ಟನೆ ನೀಡಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2021-01-18 14:59 GMT

ಬೆಂಗಳೂರು, ಜ.18: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ವಿಧೇಯಕ-2020ರ ಸುಗ್ರೀವಾಜ್ಞೆಯಲ್ಲಿರುವ ಸೆಕ್ಷನ್ 5ನ್ನು ಪಾಲಿಸುವುದು ರೈತರಿಗೆ ಭಾರೀ ಸಮಸ್ಯೆಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ನಿಯಮಗಳ ಕುರಿತು ಸ್ಪಷ್ಟನೆ ನೀಡುವಂತೆ ಸರಕಾರಕ್ಕೆ ಸೂಚಿಸಿದೆ.

ನಗರದ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್ ಸುಗ್ರೀವಾಜ್ಞೆಯನ್ನು ಅಸಂವಿಧಾನಿಕವೆಂದು ಘೋಷಿಸಿ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಅವರು, ಸುಗ್ರೀವಾಜ್ಞೆಯಲ್ಲಿರುವ ಸೆಕ್ಷನ್ 5ರ ಪ್ರಕಾರ ಜಾನುವಾರುಗಳನ್ನು ಸಾಗಿಸುವುದು ಕಷ್ಟದ ಕೆಲಸ. ಪ್ರತಿ ಬಾರಿ ರೈತರು ಜಿಲ್ಲಾ ಪಶುವೈದ್ಯಾಧಿಕಾರಿ ಬಳಿ ಹೋಗಿ ನಿಯಮಗಳನ್ನು ಪಾಲಿಸಲು ಅನುಮತಿ ಕೇಳುವುದು ಸರಿ ಕಾಣುವುದಿಲ್ಲ. ಹೀಗಾಗಿ ನಿಯಮಗಳಿಗೆ ತಡೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಈ ವೇಳೆ ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಸರಕಾರ ಸಲ್ಲಿಸಿದ್ದ ವಿವರಣೆ ಪರಿಶೀಲಿಸಿ ಪ್ರತಿಕ್ರಿಯಿಸಿದ ನ್ಯಾಯಪೀಠ, ಸೆಕ್ಷನ್ 5 ರಡಿ ರೂಪಿಸಿರುವ ನಿಯಮಗಳಿಂದ ರೈತರಿಗೆ ತೊಂದರೆಯಾಗಲಿದೆ. ಜಾನುವಾರುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ರೈತರು ಜಿಲ್ಲಾ ಪಶುವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ಪಡೆದುಕೊಂಡು, ಜಾನುವಾರುಗಳಿಗೆ ಟ್ಯಾಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಂಥ ನಿಯಮಗಳನ್ನು ರೈತರು ಪ್ರತಿಬಾರಿ ಪಾಲಿಸಲು ಸಾಧ್ಯವಾಗುವುದಿಲ್ಲ. ಇಂಥ ನಿಯಮಗಳು ರೈತರು ತಮ್ಮ ಜಾನುವಾರುಗಳನ್ನು ಸಾಗಿಸುವುದಕ್ಕೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ರಾಜ್ಯ ಸರಕಾರ ಈ ನಿಯಮಗಳಿಗ ಸ್ಪಷ್ಟನೆ ನೀಡಬೇಕು ಎಂದು ನಿರ್ದೇಶಿಸಿತು.

ಸರಕಾರದ ಪರ ವಕೀಲರು ನಿಯಮಗಳಿಗೆ ಸ್ಪಷ್ಟನೆ ನೀಡಲು ಕಾಲಾವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ನ್ಯಾಯಪೀಠವು ಕಾಲಾವಕಾಶ ನೀಡಿ ವಿಚಾರಣೆಯನ್ನು ಜ. 20ಕ್ಕೆ ಮುಂದೂಡಿತು.

ಅರ್ಜಿದಾರರ ಮನವಿ ಏನು: ರಾಜ್ಯದಲ್ಲಿ ಎಲ್ಲ ವಯಸ್ಸಿನ ಆಕಳು, ಕರು, ಗೂಳಿ, ಎತ್ತು ಹಾಗೂ 13 ವರ್ಷದೊಳಗಿನ ಕೋಣ ಅಥವಾ ಎಮ್ಮೆಗಳ ಹತ್ಯೆಯನ್ನು ನಿಷೇಧಿಸಲು ಸರಕಾರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ರೂಪಿಸಿದೆ. ವಿಧಾನಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ದೊರೆತಿದೆ. ಆದರೆ, ವಿಧಾನ ಪರಿಷತ್ತಿನಲ್ಲಿ ಅನುಮೋದನೆ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಮೂಲಕ ನಿಯಮ ಜಾರಿ ಮಾಡಲು ರಾಜ್ಯಪಾಲರ ಒಪ್ಪಿಗೆ ಕೋರಿತ್ತು.

ರಾಜ್ಯಪಾಲರು ಒಪ್ಪಿಗೆ ನೀಡಿದ್ದರಿಂದ ಸರಕಾರ ಮಂಗಳವಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, 1964ರಿಂದ ಕರ್ನಾಟಕದಲ್ಲಿ ಜಾನುವಾರು ಸಂರಕ್ಷಣೆ ಮತ್ತು ಗೋ ಹತ್ಯೆ ತಡೆ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ, ಜಾನುವಾರು ರಕ್ಷಣೆ ಹೆಸರಿನಲ್ಲಿ ಸುಗ್ರೀವಾಜ್ಞೆ ಅಗತ್ಯವೇನಿಲ್ಲ. ಬಿಹಾರ ಮತ್ತು ಗುಜರಾತ್ ರಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ, 15 ವರ್ಷ ಮೀರಿದ ಹಸು ಮತ್ತು ಎತ್ತುಗಳನ್ನು ವ್ಯವಸಾಯ, ಹೈನುಗಾರಿಕೆ ಉಪಯೋಗಕ್ಕೆ ಬರುವುದಿಲ್ಲ. ಅಂತಹ ಹಸು ಹಾಗೂ ಎತ್ತುಗಳನ್ನು ಕಸಾಯಿ ಖಾನೆಗೆ ರೈತರು ಮಾರಾಟ ಮಾಡಬಹುದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಅಲ್ಲದೇ, ರಾಜ್ಯದ ಈ ಸುಗ್ರೀವಾಜ್ಞೆ ಸಂವಿಧಾನದ ಮೂಲ ತತ್ವ ಹಾಗೂ ಅಶಯಗಳಿಗೆ ವಿರುದ್ಧವಾಗಿದೆ. ಮುಸ್ಲಿಮರು, ದಲಿತರ ಮತ್ತು ಇತರೆ ಅಲ್ಪಸಂಖ್ಯಾತರ ಆಹಾರದ ಹಕ್ಕನ್ನು ಕಸಿದುಕೊಳ್ಳಲಿದೆ. ವಿಧಾನಪರಿಷತ್ತಿನಲ್ಲಿ ಅಂಗೀಕಾರ ದೊರೆಯದೇ ಹೋದರೂ ಸರಕಾರ ಸುಗ್ರೀವಾಜ್ಞೆ ಹೊರಡಿಸಿರುವುದು ಏಕಪಕ್ಷೀಯ ಮತ್ತು ತಾರತಮ್ಯದಿಂದ ಕೂಡಿದೆ. ಸಂವಿಧಾನ ಆಶಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News