ಅಮಿತ್ ಶಾ, ಸಿಎಂ ಬಿಎಸ್‍ವೈ ವಿರುದ್ಧ ಎಫ್‍ಐಆರ್ ದಾಖಲಿಸಲು ಕೋರಿ ಡಿಸಿ, ಕಮಿಷನರ್ ಗೆ ದೂರು

Update: 2021-01-18 15:09 GMT
File Photo

ಬೆಳಗಾವಿ, ಜ, 18: ನಿನ್ನೆ ಜಿಲ್ಲೆಯಲ್ಲಿ ಏರ್ಪಡಿಸಿದ್ದ ಜನಸೇವಕ ಸಮಾವೇಶದಲ್ಲಿ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿಗಳು ಸೇರಿದಂತೆ ಸಚಿವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂದು ಕೋರಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ, ಸರಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಸೋಮವಾರನಗರದಲ್ಲಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಭೀಮಪ್ಪ ಗಡಾದ, ಕೇಂದ್ರ ಸರಕಾರ ಹೊರಡಿಸಿದ ಕೊವೀಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಜನಸೇವಕ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸಹಿತ ಹಲವು ಮುಖಂಡರು ಪಾಲ್ಗೊಂಡಿದ್ದಾರೆಂದು ದೂರಿದರು.

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ. ಅಲ್ಲದೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯ. ಆದರೆ, ಜನಸೇವಕ ಸಮಾವೇಶದಲ್ಲಿ ಇದ್ಯಾವುದನ್ನು ಪಾಲಿಸಿಲ್ಲ ಎಂದು ಗಡಾದ ಆರೋಪಿಸಿದರು.

ಸಮಾವೇಶ ರದ್ದುಪಡಿಸಲು ಕೋರಿ ಜ.13ಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕಾರಣಿಗಳಿಗೆ ಒಂದು ಮತ್ತು ಜನರಿಗೆ ಒಂದು ಕಾನೂನು ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನೂರಕ್ಕೂ ಹೆಚ್ಚು ಜನ ಸೇರಿಸುವಂತಿಲ್ಲ. ಆದರೆ, 1.5 ಲಕ್ಷ ಜನ ಸೇರಿಸಿ ಸಮಾವೇಶ ನಡೆಸಲಾಗಿದೆ. ಅಲ್ಲದೆ, 65 ವರ್ಷ ಮೇಲ್ಪಟ್ಟವರು 10 ಸಾವಿರಕ್ಕೂ ಹೆಚ್ಚು ಮಂದಿ ಸೇರಿಸಲಾಗಿತ್ತು ಎಂದು ಭೀಮಪ್ಪ ಗಡಾದ ವಾಗ್ದಾಳಿ ನಡೆಸಿದರು.

ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ ಸಹಿತ ಸಚಿವರು, ಶಾಸಕರು ಸೇರಿದಂತೆ ಮುಖಂಡರ ವಿರುದ್ಧ ಕೂಡಲೇ ಎಫ್‍ಐಆರ್ ದಾಖಲು ಮಾಡದಿದ್ದರೆ ಹೈಕೋರ್ಟ್ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಭೀಮಪ್ಪ ಗಡಾದ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News