ಜೆಡಿಎಸ್ ತಂಟೆಗೆ ಬಂದರೆ ಎಡವಟ್ಟಾಗಲಿದೆ: ಸಿಎಂ ಬಿಎಸ್‍ವೈಗೆ ಕುಮಾರಸ್ವಾಮಿ ಎಚ್ಚರಿಕೆ

Update: 2021-01-18 16:44 GMT

ಬೆಂಗಳೂರು,ಜ. 18: ಜೆಡಿಎಸ್ ಪಾರ್ಟಿ ಬಗ್ಗೆ ಲಘುವಾಗಿ ಮಾತನಾಡಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ತಂಟೆಗೆ ಬಂದರೆ ಎಡವಟ್ಟಾಗಲಿದೆ. ಬಿಎಸ್‍ವೈ ಅವರಂತಹ ನೂರು ಮಂದಿ, ಮತ್ತೊಂದು ಜನ್ಮವೆತ್ತಿ ಬಂದರೂ ಜೆಡಿಎಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಿಮ್ಮ ಬಂಡವಾಳ ನನ್ನ ಬಳಿ ಇದೆ. ನಾನು ಕೈ ಹಾಕಿದರೆ ಪರಿಣಾಮ ಪ್ರತಿಕೂಲವಾಗಲಿದೆ. ಇಲ್ಲಿಯವರೆಗೂ ಸುರಕ್ಷಿತವಾಗಿದ್ದೀರಿ. ನಾನು ಮೌನವಾಗಿದ್ದೇನೆ. ಜೆಡಿಎಸ್ ಸುದ್ದಿಗೆ ಬಂದರೆ ಪರಿಸ್ಥಿತಿ ಸರಿ ಇರುವುದಿಲ್ಲ' ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

2008ರಲ್ಲೇ ಜೆಡಿಎಸ್ ಮುಗಿಸುತ್ತೇನೆ, ಅಪ್ಪ-ಮಗನನ್ನು ಮುಗಿಸುತ್ತೇನೆ ಎಂದು ಹೇಳಿದ್ದಿರಿ. ಆಗ ಮೂವರು ಸಿಎಂ ಬದಲಾದರು. ರಾಜಕೀಯಕ್ಕೆ ವೈಯಕ್ತಿಕ ಸಿಡಿ ಬಳಸಿಕೊಳ್ಳುವುದಿಲ್ಲ. ನಾಡಿನ ಸಂಪತ್ತು ಲೂಟಿ ದಾಖಲೆಗಳನ್ನು ಬಳಸಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ನಾನು ಸಿಡಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಯಾರ್ಯಾರು, ಹೇಗೆಗೆ ಬಳಸಿಕೊಳ್ಳುತ್ತಾರೆಂಬುದು ಗೊತ್ತು, ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿಯ ಬಿ' ಟೀಮ್ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು. ಬಿಎಸ್‍ವೈ ಎಪ್ರಿಲ್‍ನಲ್ಲಿ ಬದಲಾಗಲಿದ್ದಾರೆಂದು ಆರೆಸ್ಸೆಸ್ ಮೂಲದ ಮಾತುಗಳನ್ನು ಹಾಡುತ್ತಿದ್ದಾರೆ. ಹಾಗಾದರೆ ಆರೆಸ್ಸೆಸ್‍ 'ಬಿ' ಟೀಮ್ ಇರಬಹುದು ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.

‘9 ಕೋಟಿ ಸಾಲ, ಈಡಿ ಎಲ್ಲಿ ?: ಸಚಿವ ರಮೇಶ್ ಜಾರಕಿಹೊಳಿ, ಯೋಗೇಶ್ವರ್ 9 ಕೋಟಿ ರೂ.ಸಾಲ ಮಾಡಿದ್ದಾರೆಂದು ಹೇಳಿದ್ದಾರೆ. ಹಣ ಉಪಯೋಗ ಮಾಡಿ ಮೈತ್ರಿ ಸರಕಾರ ಅಸ್ಥಿರಗೊಳಿಸಿದ್ದಾರೆಂಬುದಕ್ಕೆ ಪುಷ್ಟಿ ನೀಡಿದೆ. ಮೈತ್ರಿ ಸರಕಾರದ ಅವಧಿಯಲ್ಲಿ ಕ್ರಿಯಾಶೀಲವಾಗಿದ್ದ ಈಡಿ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಈಗ ಎಲ್ಲಿ? ಎಂದು ಎಚ್‍ಡಿಕೆ ಕೇಳಿದರು.

ಇನ್ನಾದರೂ ಆಡಳಿತ ನಡೆಸಿ: ಸಚಿವ ಸಂಪುಟ ರಚನೆಯಾಗಿದೆ. ಇನ್ನಾದರೂ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸಿ, ಜನರ ವಿಶ್ವಾಸ ಗಳಿಸುವಂತಹ ಆಡಳಿತ ನಡೆಸಿ ಎಂದ ಅವರು, ಬಿಜೆಪಿಯಲ್ಲಿ ಅಸಮಾಧಾನ ಮನೆ ಮಾಡಿದ್ದು ರಾಜ್ಯದ ಜನತೆ ವಾಸ್ತವ ಸ್ಥಿತಿಯನ್ನು ಅರಿಯಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News