ಶಾಸಕ ಯತ್ನಾಳ್ ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಆಹ್ವಾನಿಸುತ್ತೇವೆ: ಶಾಸಕ ತನ್ವೀರ್ ಸೇಠ್

Update: 2021-01-18 16:54 GMT

ಮೈಸೂರು,ಜ.18: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಆಹ್ವಾನಿಸುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬೆಂಬಲಿಗರಿಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನಡೆಯುತ್ತಿದೆ ಎಂಬ ಶಾಸಕ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ತನ್ವೀರ್ ಸೇಠ್, ಯತ್ನಾಳ್ ಬಿಜೆಪಿಯಲ್ಲಿ ಮೂಲೆಗುಂಪಾಗಿದ್ದಾರೆ. ಅವರ ಹೇಳಿಕೆಯನ್ನು ಪಕ್ಷ ಗಂಭೀಬೀರವಾಗಿ ತೆಗೆದುಕೊಳ್ಳಬೇಕು. ಒಂದು ವೇಳೆ ಯತ್ನಾಳ್ ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಆಹ್ವಾನಿಸುತ್ತೇವೆ. ರಾಜ್ಯದಲ್ಲಿ ಇಂದು ವಿರೋಧ ಪಕ್ಷ ಬದುಕಿದೆ, ಆಡಳಿತ ಪಕ್ಷ ಸತ್ತಿದೆ ಎಂದು ತಿಳಿಸಿದರು.

ಕಾಂಗ್ರೆಸ್‍ನ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಜೆಡಿಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಸದ್ಯದಲ್ಲಿಯೇ ಮುಸ್ಲಿಂ ಲೆಜಿಸ್ಲೇಟಿವ್ ಫೋರಂ ವತಿಯಿಂದ ಸಭೆ ನಡೆಸಿ ಚರ್ಚಿಸುತ್ತೇವೆ ಎಂದು ತನ್ವೀರ್ ಸೇಠ್ ತಿಳಿಸಿದರು.

ಇಬ್ರಾಹಿಂ ನಮ್ಮ ನಾಯಕರು, ಅವರು ಎಂದೂ ಏಕಾಂಗಿಯಲ್ಲ. ಮುಸ್ಲಿಂ ಜನಪ್ರತಿನಿಧಿಗಳೇ ಸೇರಿ ಸ್ಥಾಪಿಸಿಕೊಂಡಿರುವ ಮುಸ್ಲಿಂ ಲೆಜಿಸ್ಲೇಟಿವ್ ಫೋರಂ ವತಿಯಿಂದ ಸಭೆ ನಡೆಸಿ ಸಿಎಂ ಇಬ್ರಾಹಿಂ ಅವರ ಅಸಮಾಧಾನದ ಬಗ್ಗೆ ಸತ್ಯವನ್ನು ಹುಡುಕುತ್ತೇವೆ. ಇಬ್ರಾಹಿಂ ಎಲ್ಲೂ ಹೋಗಲ್ಲ ಅಂತ ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತೇನೆ. ಅವರು ಎಲ್ಲೂ ಹೋಗಲ್ಲ. ಅವರು ನಮ್ಮ ಜೊತೆ ಸಮಾಲೋಚನೆ ಮಾಡಿಯೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇಬ್ರಾಹಿಂ ಜತೆ ಪಕ್ಷದ ಮುಖಂಡರಾದ ಸುರ್ಜೇವಾಲ ಮಾತನಾಡಿದ್ದಾರೆ. ಹೀಗಾಗಿ ಸಭೆ ಕರೆಯಲು ನಿರ್ಧರಿಸಿದ್ದೇವೆ ಎಂದರು.

ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಕೆ
ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಐದು ವರ್ಷಗಳ ಆಳ್ವಿಕೆಗೆ ಮೈತ್ರಿ ಒಪ್ಪಂದ ಆಗಿದೆ. ಮಾತುಕತೆಯಂತೆ ಈಗ ಎರಡು ವರ್ಷ ಪೂರೈಸಿದ್ದು, ಇನ್ನು ಮೂರು ವರ್ಷ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮುಂದುವರಿಯಲಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಅನುದಾನ, ಸಂಪನ್ಮೂಲದ ಕೊರತೆಯಿಂದ ಕೆಲಸ ಮಾಡಲು ಆಗುತ್ತಿಲ್ಲ ಎಂಬ ಮಾತುಗಳು ಬರುವುದು ಸಹಜ. ಮೇಯರ್ ಮತ್ತು ಉಪ ಮೇಯರ್ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಜೆಡಿಎಸ್ ಮುಖಂಡರೊಂದಿಗೆ ಮಾತುಕತೆ ನಡೆಸುತ್ತೇವೆ. ಈಗಾಗಲೇ ಸಾ.ರಾ.ಮಹೇಶ್, ಜಿ.ಟಿ.ದೇವೆಗೌಡ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ತನ್ವೀರ್ ಸೇಠ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News