ಲಂಚ ಸ್ವೀಕರಿಸುತ್ತಿದ್ದ ಡಿಸಿ ಕಚೇರಿಯ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

Update: 2021-01-18 17:19 GMT

ಮಂಡ್ಯ, ಜ.18: ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಲು ಏಜೆನ್ಸಿಗೆ ಶಿಫಾರಸು ಮಾಡುವುದಕ್ಕಾಗಿ ಲಂಚ ಪಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿಯ ಮಹಿಳಾ ಅಧಿಕಾರಿ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಕಚೇರಿ ಅಧೀಕ್ಷಕಿ, ತಾಂತ್ರಿಕ ಸಹಾಯಕಿ ಹಾಗೂ ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕಿ ವಿಜಯ ಎಂಬವರನ್ನು 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಪೊಲೀಸರು ಬಂಧಿಸಿದ್ದಾರೆ.

ಸರ್ವೆಯರ್ ಕೆಲಸಕ್ಕೆ ಟೆಂಡರ್ ಪಡೆದಿರುವ ಸಮರ್ಥ್ ಅಲೈಡ್ ಸರ್ವೀಸಸ್ ಏಜೆನ್ಸಿಗೆ ತನ್ನ ಹೆಸರು ಶಿಫಾರಸ್ಸು ಮಾಡುವಂತೆ ಅಧಿಕಾರಿ ವಿಜಯ ಅವರಲ್ಲಿ ಮಂಡ್ಯ ತಾಲೂಕು ಮಾರಸಿಂಗನಹಳ್ಳಿಯ ಮಹದೇವಯ್ಯ ಅವರು ಮನವಿ ಮಾಡಿದ್ದು, ಸದರಿ ಹುದ್ದೆಗೆ ಶಿಫಾರಸ್ಸು ಮಾಡಲು ವಿಜಯ ಅವರು ಮಹದೇವಯ್ಯ ಅವರಿಗೆ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಸಂಬಂಧ ಮಹದೇವಯ್ಯ ಮಂಡ್ಯ ಎಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸೋಮವಾರ ಕಚೇರಿಯಲ್ಲಿ ಮಹದೇವಯ್ಯ ಅವರಿಂದ 25 ಸಾವಿರ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿ ವಿಜಯ ಅವರನ್ನು ಎಸಿಬಿ ಪೊಲೀಸ್ ಅಧಿಕಾರಿಗಳು ಬಂಧಿಸಿದರು.

ಮೈಸೂರಿನ ದಕ್ಷಿಣ ವಲಯ ಎಸಿಬಿ ಅಧೀಕ್ಷಕ ಡಾ.ಸುಮತ್ ಡಿ.ಪಿ ಮಾರ್ಗದರ್ಶನದಲ್ಲಿ ಮಂಡ್ಯ ಎಸಿಬಿ ಠಾಣೆಯ ಪ್ರಭಾರ ಪೊಲೀಸ್ ಅಧೀಕ್ಷಕ ಎಚ್.ಪರುಶುರಾಮಪ್ಪ, ನಿರೀಕ್ಷಕ ಸತೀಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News