ಕಾಂಗ್ರೆಸ್ ಹೆಗಲಮೇಲೆ ಕುಳಿತು ಮಾತಾಡಲು ಉದ್ಧವ್ ಠಾಕ್ರೆಗೆ ನೈತಿಕತೆ ಇಲ್ಲ: ಸಿ.ಟಿ.ರವಿ

Update: 2021-01-18 17:28 GMT

ಚಿಕ್ಕಮಗಳೂರು, ಜ.18: ಗಡಿ ವಿವಾದವನ್ನು ಸುಖಾಸುಮ್ಮನೆ ಕೆಣಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಬಹಳ ವರ್ಷಗಳಿಂದ ನಡೆದುಬಂದಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯಾಗಿದ್ದು ಕಾಂಗ್ರೆಸ್ ಅಧಿಕಾರವಧಿಯಲ್ಲಿ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಈ ಬಗ್ಗೆ ಪ್ರಶ್ನೆ ಮಾಡುವುದಿದ್ದರೆ ಸದ್ಯ ಮಹಾರಾಷ್ಟ್ರದಲ್ಲಿ ತಾವು ಅಧಿಕಾರಕ್ಕೆ ಬರಲು ಕಾರಣಕರ್ತರಾಗಿರುವ ಕಾಂಗ್ರೆಸ್ ಪಕ್ಷದವರನ್ನೇ ಪ್ರಶ್ನೆ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಕರ್ನಾಟಕದ ಸೊಲ್ಲಾಪುರ, ಜತ್ತು, ಸಾಂಗ್ಲಿ, ಸೇರಿದಂತೆ ಕನ್ನಡ ಭಾಷಿಗರು ಇರುವ ಗಡಿಭಾಗಗಳು ಮಹಾರಾಷ್ಟ್ರಕ್ಕೆ ಸೇರಿವೆ. ಹಾಗೆಯೇ ಮರಾಠಿ ಭಾಷಿಗರು ಇರುವ ಪ್ರದೇಶಗಳು ಕರ್ನಾಟಕದ ಗಡಿಯೊಳಗೆ ಸೇರಿಕೊಂಡಿವೆ. ಈ ಸಮಸ್ಯೆಗಳ ಅಧ್ಯಯನಕ್ಕೆಂದು ನೇಮಕಗೊಂಡಿದ್ದ ಸರೋಜಿನಿ ಮಹಿಷಿ ಆಯೋಗ ತನ್ನ ವರದಿಯನ್ನೂ ನೀಡಿದೆ. ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭ ಗಡಿ ಭಾಗದಲ್ಲಿ ಅನೇಕ ಪ್ರದೇಶಗಳು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಆಗಿವೆ. ಆದರೂ ಆಯಾ ಭಾಷಿಗರ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಕೆಲಸವನ್ನು ಭಾರತೀಯರೆಲ್ಲರೂ ಮಾಡಿದ್ದಾರೆ. ಅವರ ಸಾಂಸ್ಕೃತಿಕ ಆಸ್ಮಿತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದರು.

ಸಿಎಂ ಉದ್ಧವ್ ಠಾಕ್ರೆ ಅವರ ಟ್ವೀಟ್ ನಂತೆ ಕೇರಳದ ಕಾಸರಗೋಡಿನಲ್ಲಿ ಕನ್ನಡಿಗರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂಬ ಕೂಗೂ ಇತ್ತು. ಆದರೆ ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭ ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭ ಮಹಾರಾಷ್ಟ್ರಕ್ಕೆ ಅನ್ಯಾಯವಾಗಿದ್ದರೆ ಅದನ್ನು ಕಾಂಗ್ರೆಸ್ ಬಳಿಯೇ ಕೇಳಬೇಕು. ಮಹಾರಾಷ್ಟ್ರದಲ್ಲಿ ಸಿಎಂ ಆಗಿರುವ ಶಿವಸೇನೆಯ ಉದ್ಧವ್ ಠಾಕ್ರೆ ಕಾಂಗ್ರೆಸ್ ಬೆಂಬಲದಿಂದ ಅಧಿಕಾರದಲ್ಲಿದ್ದಾರೆ. ಗಡಿ ವಿಚಾರದಲ್ಲಿ ಅವರಿಗೆ ಅನ್ಯಾಯ ಆಗಿದ್ದರೆ ಅದು ಕಾಂಗ್ರೆಸ್ ಪಕ್ಷದಿಂದಲೇ ಆಗಿದ್ದು, ಕಾಂಗ್ರೆಸ್ ನ ಹೆಗಲಮೇಲೆ ಕುಳಿತುಕೊಂಡು ಹೀಗೆ ಮಾತನಾಡಲು ಉದ್ಧವ್ ಠಾಕ್ರೆಗೆ ನೈತಿಕತೆ ಇಲ್ಲ. ಗಡಿ ವಿಚಾರದಲ್ಲಿ ಅವರಿಗೆ ಅನ್ಯಾಯವಾಗಿದ್ದರೆ ಕಾಂಗ್ರೆಸ್ ಹೆಗಲ ಮೇಲಿಂದ ಮೊದಲು ಕೆಳಗಿಳಿದು ನಂತರ ಮಾತನಾಡಲಿ ಎಂದು ಸಿ.ಟಿ.ರವಿ ಹೇಳಿದರು.

ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭ ಮಹಾರಾಷ್ಟ್ರಕ್ಕೆ ಅನ್ಯಾಯವಾಗಿದೆ ಎಂದು ಉದ್ಧವ್ ಠಾಕ್ರೆ ಹೇಳುತ್ತಿದ್ದಾರೆ. ಆದರೆ ಅವರು ಕಾಂಗ್ರೆಸ್ ಪಕ್ಷದ ಹೆಗಲ ಮೇಲೆ ಕುಳಿತು ಸಿಎಂ ಆಗಿದ್ದರೆ, ಅನ್ಯಾಯ ಮಾಡಿದವರ ಹೆಗಲ ಮೇಲೆ ಕುಳಿತು ಅನ್ಯಾಯವಾಗಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಉದ್ಧವ್ ಠಾಕ್ರೆ ಕಾಂಗ್ರೆಸ್ ಸಖ್ಯ ತೊರೆದು ಈ ಬಗ್ಗೆ ಮಾತನಾಡಲಿ ಎಂದರು.

ಕೇಂದ್ರ ಸರಕಾರ ಜಾರಿ ಮಾಡಿರುವ ನೂತನ ಶಿಕ್ಷಣ ನೀತಿಯಲ್ಲಿ ಯಾವುದೇ ರಾಜ್ಯದ, ಯಾವುದೇ ಭಾಷೆ ಮಾತನಾಡುವವರು ದೇಶದ ಯಾವ ಮೂಲೆಯಲ್ಲಾದರೂ ತಮ್ಮದೇ ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದೆ ಎಂದ ಅವರು, ಯಾರು ಎಲ್ಲೇ ಇದ್ದರೂ ಅವರವರ ಮಾತೃ ಭಾಷೆಯ ಮೇಲೆ ಅಭಿಮಾನ ಇದ್ದಲ್ಲಿ ಅಂತಹ ಭಾಷೆಯನ್ನು ಉಳಿಸಿಕೊಳ್ಳಲು, ಭಾಷೆಯ ಸಾಂಸ್ಕೃತಿಕ ಆಸ್ಮಿತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಕನ್ನಡಿಗರು ಮಹಾರಾಷ್ಟ್ರಾದ ಪೂನಾದಲ್ಲಿದ್ದರೂ ಕನ್ನಡದ ಮೇಲೆ ಅಭಿಮಾನ ಇದ್ದಲ್ಲಿ ಭಾಷೆ ಉಳಿಯುತ್ತದೆ. ಅಭಿಮಾನ್ಯ ಶೂನ್ಯರಾಗಿದ್ದರೆ ಕನ್ನಡ ನಾಡಿನಲ್ಲೇ ಕನ್ನಡ ಶಾಲೆಗಳು ಮುಚ್ಚುತ್ತವೆ. ಮರಾಠಿಗರು ಕರ್ನಾಟಕದಲ್ಲಿದ್ದರೂ, ಗೋವಾದಲ್ಲಿದ್ದರೂ ಅವರಲ್ಲಿ ಭಾಷೆಯ ಮೇಲೆ ಅಭಿಮಾನ ಇದ್ದಲ್ಲಿ ತಮ್ಮ ಭಾಷೆ, ಸಾಂಸ್ಕೃತಿಕತೆ ಉಳಿಸಿಕೊಳ್ಳಲು ನೂತನ ಶಿಕ್ಷಣ ನೀತಿ ಅವಕಾಶ ನೀಡಿದೆ ಎಂದು ಸಿ.ಟಿ.ರವಿ ಹೇಳಿದರು.

ಸಿದ್ದರಾಮಯ್ಯ ಗಾಂಧಿವಾದಿಯಲ್ಲ, ಜಿನ್ನಾವಾದಿ
ಸಿಎಂ ಬದಲಾವಣೆ ಆಗುವ ಬಗ್ಗೆ ತನಗೆ ಆರೆಸ್ಸೆಸ್ ಮೂಲಗಳಿಂದಲೇ ಮಾಹಿತಿ ಬಂದಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಯಾವಾಗ ಆರೆಸ್ಸೆಸ್ ಸೇರಿದ್ದರೆಂದು ತನಗೆ ಗೊತ್ತಿಲ್ಲ. ಆರೆಸ್ಸೆಸ್ ಮೂಲ ಏನೆಂದು ತಿಳಿಯಲು ಆರೆಸ್ಸೆಸ್ಗೆ ಬರಬೇಕು. ಸಿದ್ದರಾಮಯ್ಯ ಮೊದಲು ಆರೆಸ್ಸೆಸ್ ಗೆ ಬರಲಿ ಆಮೇಲೆ ಮಾತನಾಡಲಿ. ಸಿದ್ದರಾಮಯ್ಯರಿಗೆ ತಮ್ಮ ಮೂಲದ ಬಗ್ಗೆ ಗೊಂದಲವಿದೆ. ಒಮ್ಮೊಮ್ಮೆ ಅವರು ನಾನು ಹಿಂದು ಎನ್ನುತ್ತಾರೆ, ಮತ್ತೊಮ್ಮೆ ನಾನು ಗಾಂಧೀಜಿ ಹೇಳಿದ ಹಿಂದು ಎನ್ನತ್ತಾರೆ. ಗಾಂಧಿ ದನದ ಮಾಂಸ ತಿನ್ನಿ ಎಂದೂ ಹೇಳಿಲ್ಲ, ಗೋಹತ್ಯೆ ನಿಷೇದ ಆಗಬೇಕೆಂದಿದ್ದರು. ನಾನು ದನದ ಮಾಂಸ ತಿನ್ನುತ್ತೇನೆ ಎಂದು ಹೇಳುವ ಸಿದ್ದರಾಮಯ್ಯನವರದ್ದು ಗಾಂಧಿವಾದ ಅಲ್ಲ, ಜಿನ್ನಾ ವಾದ. ಜಿನ್ನಾ ದನದ ಮಾಂಸ ತಿನ್ನುತ್ತೇನೆ ಎಂದಿದ್ದಾರೆ. ಹಾಗಾಗಿ ಸಿದ್ದರಾಮಯ್ಯನವರದ್ದು ಗಾಂಧಿವಾದ ಅಲ್ಲ. ಆರೆಸ್ಸೆಸ್ ಮೂಲ ತಿಳಿಯಬೇಕಾದರೇ ಅಪ್ಪಟ ದೇಶಭಕ್ತನಾಗಿರಬೇಕು. ಜಾತಿವಾದಿ, ಓಟ್ ಬ್ಯಾಂಕ್ ರಾಜಕೀಯ ಮಾಡುವವರಿಗೆ ಆರೆಸ್ಸೆಸ್ ಮೂಲ ತಿಳಿಯಲ್ಲ. ಆರೆಸ್ಸೆಸ್ ಗೆ ಮುಖಂಡರೂ ಇಲ್ಲ. ಸಿದ್ದರಾಮಯ್ಯ ರಾತ್ರಿ ಕನಸಿನಲ್ಲಿ ಕಾಣಿಸಿದ್ದನ್ನು ಬೆಳಗ್ಗೆ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. 

ವ್ಯಾಕ್ಸಿನ್ ನಿಂದ ಅನಾಹುತವಾಗದಿರುವುದು ವಿರೋಧಿಗಳ ಸಂಕಟವಾಗಿದೆ
ಕೋವಿಡ್-19 ವ್ಯಾಕ್ಸಿನ್ ಗೆ ಕೆಲವರು ವಿರೋಧ ಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಕೇಂದ್ರದ ಬಿಜೆಪಿ ಸರಕಾರ ಯಾವುದೇ ಒಳ್ಳೆ ಕೆಲಸ ಮಾಡಿದರೂ ವಿರೋಧ ವ್ಯಕ್ತಪಡಿಸುವ ಮನಸ್ಥಿತಿಯವರು ದೇಶದಲ್ಲಿದ್ದಾರೆ. ಅವರಿಗೆ ಈ ಲಸಿಕೆ ಚೀನಾ, ಇಟಲಿಯಿಂದ ಬಂದಿದ್ದರೇ ಸಂಭ್ರಮಿಸುತ್ತಿದ್ದಾರೆ. ಚೀನಾದಿಂದ ಬಂದಿದ್ದರೆ ರೆಡ್ ಕಾರ್ಪೆಟ್ ಮೂಲಕ ಸ್ವಾಗತಿಸುತ್ತಿದ್ದರು. ಇಟಲಿಯಿಂದ ಬಂದಿದ್ದರೆ ಕಾಂಗ್ರೆಸ್ ನಾಯಕರನ್ನೇ ತಲೆ ಮೇಲೆ ಹೊತ್ತು ಸಂಭ್ರಮಿಸುತ್ತಿದ್ದರು. ದೇಶದಲ್ಲೇ ತಯಾರಿಸಿದ ಕೋವಿಡ್-19 ವ್ಯಾಕ್ಸಿನ್ ದೇಶದಲ್ಲಿ ಯಾವುದೇ ಅಡ್ಡಪರಿಣಾಮ ಬೀರಿಲ್ಲ. ನಾರ್ವೆ ದೇಶದಲ್ಲಾದಂತೆ ಇಲ್ಲಿ ಏನೂ ಆಗಿಲ್ಲ ಎಂಬುದೇ ವಿರೋಧಿಗಳ ಸಂಕಟವಾಗಿದೆ. ದೇಶದಲ್ಲೇ ಕೋವ್ಯಾಕ್ಸಿನ್, ಕೋವಿಶೀಲ್ಡ್ ತಯಾರಾಗಿರುವುದು ಹೆಮ್ಮೆಯ ವಿಷಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News