ಕಾಫಿ ಬೋರ್ಡ್ ಕಚೇರಿ ಮುಚ್ಚಲು ಕೇಂದ್ರದಿಂದ ಹುನ್ನಾರ ಆರೋಪ: ಕಾಫಿ ಬೆಳೆಗಾರರ ಸಂಘದಿಂದ ಧರಣಿ

Update: 2021-01-18 17:41 GMT

ಚಿಕ್ಕಮಗಳೂರು, ಜ.18: ಕೇಂದ್ರ ಸರಕಾರ ಪಟ್ಟಣದಲ್ಲಿರುವ ಕಾಫಿ ಮಂಡಳಿ ಕಚೇರಿಯನ್ನು ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿ ಕಾಫಿ ಬೆಳೆಗಾರರು ಆಲ್ದೂರಿನಲ್ಲಿ ಸೋಮವಾರ ಧರಣಿ ನಡೆಸಿದರು.

ಆಲ್ದೂರು ಕಾಫಿ ಬೆಳೆಗಾರರ ಸಂಘದ ನೇತೃತ್ವದಲ್ಲಿ ಬಸ್‍ಸ್ಟ್ಯಾಂಡ್ ಮುಂಭಾಗದಿಂದ ಕಾಫಿ ಮಂಡಳಿ ಉಳಿಸಿ, ಕಾಫಿ ಉದ್ಯಮ, ಬೆಳೆಗಾರರು ಮತ್ತು ಕಾರ್ಮಿಕರನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಮೆರವಣಿಗೆ ನಡೆಸಿದ ನೂರಾರು ಬೆಳೆಗಾರರು ಕಾಫಿ ಮಂಡಳಿ ಕಚೇರಿ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಕೇಂದ್ರ ಸರಕಾರದ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಸುರೇಶ್, ಕಾಫಿ ಬೆಳೆಗಾರರಿಗೆ ಸಂಪರ್ಕ ಸೇತುವಾಗಿ ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ಆಲ್ದೂರಿನ ಕಾಫಿ ಮಂಡಳಿ ಕಚೇರಿಯನ್ನು ಮುಚ್ಚುತ್ತಿರುವುದು ದುರದೃಷ್ಟಕರ. ಬೆಳೆಗಾರರು ಮತ್ತು ಕಾಫಿ ಉದ್ಯಮದ ಹಿತದೃಷ್ಟಿಯಿಂದ ಕಾಫಿ ಮಂಡಳಿ ಕಚೇರಿಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಒತ್ತಾಯಿಸಿದ ಅವರು, ಇಂದಿನ ಧರಣಿ ಸಾಂಕೇತಿಕವಾಗಿದ್ದು, ಸದ್ಯದಲ್ಲೇ ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಿಗೂ ಹೋರಾಟವನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ ಮಾತನಾಡಿ, ಅತಿವೃಷ್ಠಿ, ಅನಾವೃಷ್ಠಿ, ಬೆಲೆ ಕುಸಿತ, ಬೆಳೆ ಕುಂಠಿತ, ಗಿಡಗಳಿಗೆ ರೋಗಭಾದೆ, ಕಾರ್ಮಿಕರ ಕೊರತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಂದ ಜರ್ಝರಿತರಾಗಿರುವ ಬೆಳೆಗಾರರ ನೆರವಿಗೆ ಬಾರದ ಕೇಂದ್ರ ಸರಕಾರ ಇದೀಗ ಕಾಫಿ ಮಂಡಳಿ ಕಚೇರಿಯನ್ನು ಮುಚ್ಚುವ ಮೂಲಕ ಅವರನ್ನು ಬೀದಿಗೆ ತಳ್ಳುತ್ತಿದೆ ಎಂದು ಆರೋಪಿಸಿದರು.

ಸಾರ್ವಜನಿಕ ವಲಯಗಳು ದೇಶದ ಜನತೆಯ ಆಸ್ತಿ, ಅವುಗಳನ್ನು ಮುಚ್ಚಲು ಅಥವಾ ಮಾರಲು ಯಾವುದೇ ಸರಕಾರಗಳಿಗೂ ಅಧಿಕಾರ ಅಥವಾ ಹಕ್ಕಿಲ್ಲ ಎಂದ ಅವರು, ಕಾಫಿ ಬೆಳೆಗಾರರು ಇದರ ವಿರುದ್ಧ ತಿರುಗಿ ಬೀಳಬೇಕು, ಪಕ್ಷಾತೀತವಾಗಿ ಒಂದಾಗಿ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಈ ವೇಳೆ ಧರಣಿ ನಿರತರ ಮನವೊಲಿಕೆಗೆ ಮುಂದಾದ ಕಾಫಿ ಮಂಡಳಿ ಸಂಶೋಧನಾ ವಿಭಾಗದ ನಿರ್ದೇಶಕ ಸೂರ್ಯ ಪ್ರಕಾಶ್, ಕಾಫಿ ಮಂಡಳಿಯನ್ನು ಮುಚ್ಚುತ್ತಿಲ್ಲ. ಆರ್ಥಿಕವಾಗಿ ಹೊರೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಡಿಮೆ ಮಾಡಲಾಗುತ್ತಿದೆ. ಸಿಬ್ಬಂದಿ ಕೊರತೆಯಾಗುವುದರಿಂದ ಕೆಲವು ಕಚೇಗಳನ್ನು ಮುಚ್ಚಲಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೊಪ್ಪದ ಬೆಳೆಗಾರರು, ಅಧಿಕಾರಿಗಳು ಮತ್ತು ಸಿಬ್ಬಂದಿ ಕಡಿಮೆ ಮಾಡಿ, ಕಚೇರಿಗಳನ್ನು ಮುಚ್ಚಿದರೆ ನೀವು ಬೆಳೆಗಾರರ ಮತ್ತು ಉದ್ಯಮದ ಹಿತವನ್ನು ಹೇಗೆ ಕಾಯುತ್ತೀರಿ ? ಕೇಂದ್ರಕ್ಕೆ ಸರಿಯಾಗಿ ಮನವರಿಕೆ ಮಾಡುವ ಮೂಲಕ ಮಂಡಳಿಯನ್ನು ಉಳಿಸಿ ಎಂದು ಆಗ್ರಹಿಸಿದರು.

ಇದೇ ವೇಳೆ ಕಾಫಿ ಮಂಡಳಿ ಕಚೇರಿ ಮುಚ್ಚವುದನ್ನು ವಿರೋಧಿಸಿ ಜ.25ರಂದು ಆಲ್ದೂರಿನಿಂದ ಚಿಕ್ಕಮಗಳೂರಿನವರೆಗೆ ಕಾಲ್ನಡಿಗೆ ಜಾಥಾ ನಡೆಸಲು ಬೆಳೆಗಾರರು ನಿರ್ಧಾರ ಕೈಗೊಂಡರು. ಆಲ್ದೂರು ಕಾಫಿ ಬೆಳೆಗಾರರ ಸಂಘದ ಕಾರ್ಯದರ್ಶಿ ಎಚ್.ಇ.ಲವ, ಖಜಾಂಚಿ ತೌಸೀಫ್ ಅಲಿ, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಜಬ್ಬೀರ್ ಅಸ್ಗರ್, ಸಿ.ಸಿ.ಈರೇಗೌಡ, ಎಸ್.ಡಿ.ಅಶೋಕ್, ಜಿ.ಯು.ರಘು ಧರಣಿಯಲ್ಲಿ ಪಾಲೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News